ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗಿಟ್ಟಿಸಿದ್ದ ಯುವ ಬಾಡಿ ಬಿಲ್ಡರ್ ಸ್ನೇಹಿತರ ಜೊತೆ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಬ್ರೆಜಿಲ್ ನಲ್ಲಿ ಸಂಭವಿಸಿದೆ.
ಬ್ರೆಜಿಲ್ ಬಾಡಿಬಿಲ್ಡರ್ 28 ವರ್ಷದ ಜೋಸ್ ಮ್ಯಾಥ್ಯೂಸ್ ಕೊರಿಯ ಸಿಲ್ವಾ ಅಗ್ವಾಸ್ ಕಾರ್ಲಾಸ್ ನಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತದಿಂದ ಅಸುನೀಗಿದ್ದಾರೆ.
ದಕ್ಷಿಣ ಅಮೆರಿಕದ ಹಲವಾರು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಜೋಸ್ ಮ್ಯಾಥ್ಯೂಸ್ ಫಿಟ್ನೆಸ್ ವಿಷಯದಲ್ಲಿ ಇತರರಿಗೆ ಮಾದರಿಯಾಗುವಂತೆ ಶ್ರಮ ವಹಿಸುತ್ತಿದ್ದರು.
ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಏಕಾಏಕಿ ಜೋಸ್ ಮ್ಯಾಥ್ಯೂಸ್ ಕುಸಿದುಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ವೈದ್ಯರು ಉಳಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.
ಜೋಸ್ ಮ್ಯಾಥ್ಯೂಸ್ ಕೇವಲ ಬಾಡಿ ಬಿಲ್ಡರ್ ಮಾತ್ರ ಆಗಿರಲಿಲ್ಲ. ವಕೀಲ, ಫಿಟ್ನೆಸ್ ತರಬೇತುದಾರ ಮತ್ತು ಆಹಾರ ಪದ್ಧತಿ ತಜ್ಞ ಕೂಡ ಆಗಿದ್ದು, ಹಲವರಿಗೆ ಜೀವನ ಪದ್ಧತಿ ಮಾರ್ಗದರ್ಶನ ನೀಡುತ್ತಿದ್ದರು.
ಜೋಸ್ ಉಳಿಸಿಕೊಳ್ಳಲು ಪ್ರಯತ್ನಿಸಿದ ಸ್ನೇಹಿತರು ಹಾಗೂ ಎಲ್ಲರಿಗೂ ಧನ್ಯವಾದಗಳು ಎಂದು ಸೋದರ, ಜೋಸ್ ಗೆ ಯಾವುದೇ ಆರೋಗ್ಯದ ಸಮಸ್ಯೆಗಳಿರಲಿಲ್ಲ. ಆತ ಇತರರಿಗೆ ಮಾದರಿಯಾಗಿದ್ದ. ಆತನ ಸಾವು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.