ಆರಂಭಿಕ ಶಹಜಿಯಾದ್ ಸಿಡಿಸಿದ ಸಿಡಿಲಬ್ಬರದ 159 ರನ್ ನೆರವಿನಿಂದ ಪಾಕಿಸ್ತಾನ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿರುದ್ಧ 43 ರನ್ ಗಳ ಸುಲಭ ಜಯ ದಾಖಲಿಸಿದೆ.
ದುಬೈನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 281 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 47.1 ಓವರ್ ಗಳಲ್ಲಿ 238 ರನ್ ಗ ಆಲೌಟಾಯಿತು.
ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್ ಕೈ ಚೆಲ್ಲಿದರು. ಇದರಿಂದ 81 ರನ್ ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಈ ಹಂತದಲ್ಲಿ ಜೊತೆಯಾದ ನಿಖಿಲ್ ಕುಮಾರ್ ಮತ್ತು ಕಿರಣ್ [20] 5ನೇ ವಿಕೆಟ್ ಗೆ 53 ರನ್ ಜೊತೆಯಾಟದಿಂದ ಜೀವ ತುಂಬಿದರು.
ನಿಖಿಲ್ ಕುಮಾರ್ 77 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 67 ರನ್ ಗಳಿಸಿ ಔಟಾದ ನಂತರ ತಂಡ ಮತ್ತೊಮ್ಮೆ ನಾಟಕೀಯ ಕುಸಿತಕ್ಕೆ ಒಳಗಾಯಿತು. 10ನೇ ವಿಕೆಟ್ ಗೆ ಮೊಹಮದ್ ಇನಾನ್ [30] ಮತ್ತು ಯುದಜೀತ್ ಗುಹ [ಅಜೇಯ 13] 48 ರನ್ ಜೊತೆಯಟ ನಿಭಾಯಿಸಿ ತಂಡದ ಸೋಲಿನ ಅಂತರ ಕಡಿಮೆ ಮಾಡಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡಕ್ಕೆ ಶಹಜೈದ್ ಖಾನ್ ಮತ್ತು ಉಸ್ಮಾನ್ ಖಾನ್ ಮೊದಲ ವಿಕೆಟ್ ಗೆ 160 ರನ್ ಜೊತೆಯಾಟದಿಂದ ಮಿಂಚಿನ ಆರಂಭ ನೀಡಿದರು. ಉಸ್ಮಾನ್ ಖಾನ್ 94 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 60 ರನ್ ಬಾರಿಸಿ ಔಟಾದರೆ, ಶಹಜೈದ್ ಖಾನ್ 147 ಎಸೆತಗಳಲ್ಲಿ 5 ಬೌಂಡರಿ ಮತ್ತು 10 ಸಿಕ್ಸರ್ ನೆರವಿನಿಂದ 159 ರನ್ ಸಿಡಿಸಿ ತಂಡ ಮೇಲುಗೈ ಸಾಧಿಸಲು ನೆರವಾದರು.
ಸಮರ್ಥ್ ನಟರಾಜ್ 3 ವಿಕೆಟ್ ಪಡೆದು ತಿರುಗೇಟು ನೀಡಿದರೂ ತಂಡ ಉತ್ತಮ ಮೊತ್ತದತ್ತ ಸಾಗಿತ್ತು. ಮೊಹಮದ್ ರಿಯಾಜುಲ್ಲಾ 27 ರನ್ ಬಾರಿಸಿದ್ದು ಬಿಟ್ಟರೆ ಉಳಿದವರು ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ.