ಪುಷ್ಪ-2 ಚಿತ್ರದ ಮೂಲಕ ದೇಶಾದ್ಯಂತ ಭಾರೀ ಬೇಡಿಕೆಯಲ್ಲಿರುವ ನಿರ್ದೇಶಕ ಸುಕುಮಾರ್ ಚಿತ್ರರಂಗ ತೊರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಪುಷ್ಪ-2 ಚಿತ್ರದ ಬಿಡುಗಡೆ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ತಾಯಿ ಮೃತಪಟ್ಟು, ಮಗ ಅಸ್ವಸ್ಥಗೊಂಡ ಘಟನೆಯಿಂದ ಉದ್ಭವವಾಗಿರುವ ವಿವಾದಗಳಿಂದ ತತ್ತರಿಸಿರುವ ನಿರ್ದೇಶಕ ಸುಕುಮಾರ್ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಡಲ್ಲಾಸ್ ನಲ್ಲಿ ನಡೆದ ರಾಮ್ ಚರಣ್ ನಟಿಸಿರುವ ಗೇಮ್ ಚೇಂಜರ್ ಚಿತ್ರದ ಪ್ರಮೋಷನ್ ವೇಳೆ ನೀವು ಯಾವುದರಿಂದ ಹೊರಗೆ ಇರಲು ಬಯಸುತ್ತೀರಿ ಎಂಬ ಪ್ರಶ್ನೆಗೆ ‘ಸಿನಿಮಾ’ ಎಂದು ಹೇಳುವ ಮೂಲಕ ನೆರೆದಿದ್ದವರನ್ನ ಆಘಾತಕ್ಕೆ ಒಳಪಡಿಸಿದರು.
ಕೂಡಲೇ ರಾಮ್ ಚರಣ್ ಮೈಕ್ ಕಸಿದುಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ನಂತರ ನಿಮ್ಮ ನಿರ್ಧಾರವನ್ನು ಪರಾಮರ್ಶಿಸಿಕೊಳ್ಳುತ್ತೀರಿ ಎಂಬ ವಿಶ್ವಾಸವಿದೆ ಎಂದ ಹೇಳಿದರು.
ಆದರೆ ಚುಟುಕಾಗಿ ನಡೆದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಲ್ತುಳಿತ ಪ್ರಕರಣದಿಂದ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿನಿಮಾದವರು ಈಗ ಸಿನಿಮಾ ಮಾಡುತ್ತಿರುವುದು ಉದ್ಯಮವಾಗಿದೆ. ಇದರಿಂದ ಅಭಿಮಾನಿಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೇ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದ ಪೊಲೀಸರು ನಂತರ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.