ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಡ್ ಹೆಡ್ ಶತಕ ಹಾಗೂ ಮಧ್ಯಮ ವೇಗಿಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು 2ನೇ ಇನಿಂಗ್ಸ್ ನಲ್ಲಿ 175 ರನ್ ಗಳಿಗೆ ಕಟ್ಟಿಹಾಕಿದ ಆಸ್ಟ್ರೇಲಿಯಾ ತಂಡ ಗೆಲ್ಲಲು ಬೇಕಿದ್ದ 19 ರನ್ ಸುಲಭ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-1ರಿಂದ ಸಮಬಲ ಸಾಧಿಸಿತು. ಅಲ್ಲದೇ ಪಿಂಕ್ ಚೆಂಡಿನ ಟೆಸ್ಟ್ ನಲ್ಲಿ ಆಡಿದ 13 ಪಂದ್ಯಗಳಲ್ಲಿ 12ರಲ್ಲಿ ಗೆಲುವಿನ ದಾಖಲೆ ಬರೆಯಿತು.
5 ವಿಕೆಟ್ ಗೆ 128 ರನ್ ಗಳಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ತಂಡ 175 ರನ್ ಗೆ ಆಲೌಟಾಯಿತು. ನಿತೀಶ್ ಕುಮಾರ್ ರೆಡ್ಡಿ (42) ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಆಸೀಸ್ ವೇಗದ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದು ಫಾರ್ಮ್ ಗೆ ಮರಳಿದರೆ, ಸ್ಕಾಟ್ ಬೋಲೆಂಡ್ 3 ಮತ್ತು ಮಿಚೆಲ್ ಸ್ಟಾರ್ಕ್ 2 ವಿಕೆಟ್ ಗಳಿಸಿದರು.