ಸಚಿವ ಈಶ್ವರ್ ಖಂಡ್ರೆ ಕಚೇರಿ ಎದುರು ಪರಿಹಾರಕ್ಕಗಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗಡಿ ಜಿಲ್ಲೆ ಬೀದರ್‌ನಲ್ಲಿ ಗುರುವಾರ ನಡೆದಿದೆ.
ಕಾರಂಜಾ ಸಂತ್ರಸ್ತರ ಹೋರಾಟಗಾರರು ಪರಿಹಾರ ನೀಡಲು ನೀಡಿದ್ದ ಗಡುವು ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡ ರೈತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರಂಜಾ ಸಂತ್ರಸ್ತರು ಪರಿಹಾರ ಮೊತ್ತ ನೀಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಈಶ್ವರ್ ಖಂಡ್ರೆ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, 15 ದಿನಗಳ ಗಡುವು ಇಂದಿಗೆ ಮುಕ್ತಾಯಗೊಂಡಿತ್ತು.
ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಅಸ್ವಸ್ಥರಾಗಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ನಗರದ ಬ್ರೀಮ್ಸ್ ಆಸ್ಪತ್ರೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇಂದು ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಗೆ ಕಾರಂಜಾ ಸಂತ್ರಸ್ತರು ಡೆಡ್‌ಲೈನ್ ನೀಡಿದ್ದರು. ವೈಜ್ಞಾನಿಕ ಪರಿಹಾರಕ್ಕಾಗಿ ಕಳೆದ 890 ದಿನಗಳಿಂದ ರೈತರು ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ.