ಭಾರತ ಮೂಲದ ಆರ್ಟಿಫಿಷಲ್ ಇಂಟಲಿಜೆನ್ಸಿ [Opne AI] ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಶವ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.
ಓಪನ್ ಎಐ ಸಂಸ್ಥೆಯಲ್ಲಿ ಸಂಶೋಧಕನಾಗಿ ಸೇವೆ ಸಲ್ಲಿಸುತ್ತಿದ್ದ ಸುಚಿರ್ ಬಾಲಾಜಿ ಶವದ ಬಳಿ ಯಾವುದೇ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕೊ ಪೊಲೀಸರು ಶಂಕಿಸಿದ್ದಾರೆ.
ನವೆಂಬರ್ 26ರಂದು ಬುಕನಾನ್ ಸ್ಟ್ರೀಟ್ ಅಪಾರ್ಟ್ ಮೆಂಟ್ ನಲ್ಲಿ ಸುಚಿರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಓಪನ್ ಎಐ ಸಂಸ್ಥೆಯಲ್ಲಿ ಸುಚಿರ್ 2020 ನವೆಂಬರ್ ನಿಂದ 2024 ಆಗಸ್ಟ್ ವರೆಗೆ ಕೆಲಸ ಮಾಡಿದ್ದ.
ಓಪನ್ ಎಐ ಸಂಸ್ಥೆ ಜೊತೆ ಸಹಭಾಗಿತ್ವ ಹೊಂದಿದ್ದ ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಯುವ ಸಂಶೋಧಕನ ಸಾವಿನ ಕುರಿತು ‘ಹುಂ’ ಎಂದಷ್ಟೇ ಪ್ರತಿಕ್ರಿಯಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
೨೦೧೫ರಲ್ಲಿ ಇಲಾನ್ ಮಸ್ಕ್ ಮತ್ತು ಸ್ಯಾಮ್ ಅಲ್ಟಮನ್ ಜೊತೆಯಾಗಿ ಓಪನ್ ಎಐ ಸಂಸ್ಥೆ ಆರಂಭಿಸಿದ್ದರು. ಮೂರು ವರ್ಷಗಳ ನಂತರ ಇಲಾನ್ ಮಸ್ಕ್ ಕಂಪನಿ ತೊರೆದು ಹೊರಗೆ ಬಂದಿದ್ದರು. ಕಳೆದ ತಿಂಗಳ ಓಪನ್ ಎಐ ಒಡೆತನದ ಬಗ್ಗೆ ಇಲಾನ್ ಮಸ್ಕ್ ಟೀಕಿಸಿದ್ದರು.
ಸುಚಿರ್ ಬಾಲಾಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಓಪನ್ ಎಐ ಸಂಸ್ಥೆ ಕಾಪಿರೈಟ್ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ ಚಾಟ್ ಜಿಪಿಟಿ ಇಂಟರ್ ನೆಟ್ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದರು.
ಕಳೆದ ಅಕ್ಟೋಬರ್ ನಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸುಚಿರ್, ಕೃತಕ ಬುದ್ದಿಮತ್ತೆ ಸಾಫ್ಟ್ ವೇರ್ ಗಳನ್ನು ನ್ಯಾಯ ಸಮ್ಮತವಾಗಿ ಅಭಿವೃದ್ದಿಪಡಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನಾಲ್ಕೂವರೆ ವರ್ಷ ಓಪನ್ ಎಐ ಮತ್ತು ಒಂದೂವರೆ ವರ್ಷ ಚಾಟ್ ಜಿಪಿಟಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದ ಸುಚಿರ್ ಕೃತಕ ಬುದ್ದಿಮತ್ತೆ ಸಾಫ್ಟ್ ವೇರ್ ಅಭಿವೃದ್ಧಿಯಲ್ಲಿ ಆಗುತ್ತಿರುವ ವಂಚನೆಗಳ ಕುರಿತು ಆಘಾತ ವ್ಯಕ್ತಪಡಿಸಿದ್ದರು.