ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗಿದ್ದು, 39 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮಹಾಯುತಿ ಮೈತ್ರಿ ಸರ್ಕಾರಕ್ಕೆ ಸೇರ್ಪಡೆಯಾಗಿದ್ದಾರೆ.
ನಾಗ್ಪುರದಲ್ಲಿ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ 39 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾಯುತಿ ಮೈತ್ರಿ ಸರ್ಕಾರದಲ್ಲಿ ಬಿಜೆಪಿ 19, ಎನ್ ಸಿಪಿ 9 ಮತ್ತು ಶಿವಸೇನೆಯ 11 ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.
ವಿಧಾನಸಭಾ ಚುನಾವಣೆಯಲ್ಲಿ 233 ಸ್ಥಾನ ಗೆದ್ದು ಭರ್ಜರಿ ಗೆಲುವು ದಾಖಲಿಸಿದ್ದರೂ ಸಿಎಂ ಸ್ಥಾನಕ್ಕಾಗಿ ಮೈತ್ರಿಪಕ್ಷಗಳ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಸರ್ಕಾರ ರಚನೆ ವಿಳಂಬವಾಗಿತ್ತು. ನಂತರ ಸಚಿವ ಸಂಪುಟ ವಿಸ್ತರಣೆ ಕೂಡ ಕಸರತ್ತಿನ ನಂತರ ನಡೆದಿದೆ.
ಬಹುತೇಕ ಹಿರಿಯರಿಗೆ ಮಣೆ ಹಾಕಲಾಗಿದ್ದು, ಖಾತೆ ಹಂಚಿಕೆ ಸೋಮವಾರ ಬೆಳಿಗ್ಗೆಯೊಳಗೆ ಘೋಷಿಸಬೇಕಿದೆ. ಏಕೆಂದರೆ ಸೋಮವಾರದಿಂದ ಮಹಾರಾಷ್ಟ್ರ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ.