ಸಂಸತ್ ಭವನದ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಳ್ಳಾಟ, ನೂಕಾಟ ನಡೆದು ಗೊಂದಲ ಸೃಷ್ಟಿಯಾಗಿದ್ದು, ಈ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಳ್ಳಿದ ಕಾರಣ ಬಿಜೆಪಿ ಸಂಸದ ಗಾಯಗೊಂಡಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸಂಸದರು ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ, ಏಕಾಏಕಿ ಬಿಜೆಪಿ ಸಂಸದರು ನುಗ್ಗಿದ್ದರಿಂದ ಘರ್ಷಣೆ ಉಂಟಾಯಿತು.
ಈ ವೇಳೆ ರಾಹುಲ್ ಗಾಂಧಿ ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಲು ಯತ್ನಿಸಿದಾಗ ಬಿಜೆಪಿ ಮುಖಂಡರು ಅಡ್ಡಿಪಡಿಸಿದಾಗ ರಾಹುಲ್ ಅವರನ್ನು ತಳ್ಳಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ತಲೆಗೆ ಪೆಟ್ಟಾಗಿದೆ.
ರಾಹುಲ್ ಗಾಂಧಿ ತಳ್ಳಿದ್ದರಿಂದ ಒಬ್ಬ ಸಂಸದ ನನ್ನ ಮೇಲೆ ಬಿದ್ದಿದ್ದರಿಂದ ಕೆಳಗೆ ಬಿದ್ದ ನನಗೆ ಗಾಯವಾಗಿದೆ ಎಂದು ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಮುಖಂಡರು ಸಂಸದನ ಮೇಲೆ ರಾಹುಲ್ ಗಾಂಧಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾನು ಅಧಿವೇಶನಕ್ಕೆ ತೆರಳುತ್ತಿದ್ದಾಗ ನನ್ನನ್ನು ಕೆಲವು ಬಿಜೆಪಿ ಮುಖಂಡರು ಒಳಗೆ ಹೋಗದಂತೆ ತಡೆದರು. ಸಂಸದನಾಗಿ ಅಧಿವೇಶನಕ್ಕೆ ಹೋಗುವುದು ನನ್ನ ಹಕ್ಕು. ಆದ್ದರಿಂದ ಅವರನ್ನು ತಳ್ಳಿ ಒಳಗೆ ಹೋಗಲು ಯತ್ನಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸಂಸದರು ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಯತ್ನಿಸಿದರು. ಇದರಿಂದ ಎರಡೂ ಪಕ್ಷಗಳ ನಡುವೆ ನೂಕಾಟ, ತಳ್ಳಾಟ ನಡೆದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಯಿತು.