Tuesday, June 30, 2026
Google search engine
Homeಬೆಂಗಳೂರುಶೀಘ್ರ ಬೆಂಗಳೂರು ದಕ್ಷಿಣ ಜಿಲ್ಲೆ ಅಸ್ತಿತ್ವಕ್ಕೆ, ನಿಮ್ಮ ಜಮೀನು ಮಾರಿಕೊಳ್ಳಬೇಡಿ: ಡಿಕೆ ಶಿವಕುಮಾರ್

ಶೀಘ್ರ ಬೆಂಗಳೂರು ದಕ್ಷಿಣ ಜಿಲ್ಲೆ ಅಸ್ತಿತ್ವಕ್ಕೆ, ನಿಮ್ಮ ಜಮೀನು ಮಾರಿಕೊಳ್ಳಬೇಡಿ: ಡಿಕೆ ಶಿವಕುಮಾರ್

15-20 ವರ್ಷಗಳ ಹಿಂದೆ ಈ ಭಾಗದಲ್ಲಿ ಜಮೀನಿನ ಬೆಲೆ ಎಷ್ಟಿತ್ತು? ಈಗ ಎಷ್ಟು ಆಗಿದೆ? ನಿಮಗೆ ನೇರವಾಗಿ ಹಣ ನೀಡಲಾಗದಿದ್ದರೂ ನಿಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನಿಮಗೆ ನೆರವಾಗಿದ್ದೇನೆ. ಆಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ ಎಂದು ಡಿಕೆ ಶಿವಕುಮಾರ್  ತಿಳಿಸಿದರು.

ಬೆಂಗಳೂರಿನ ಕನಕಪುರದ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಭಾನುವಾರ ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಹಾಗೂ ಮರು ಭೂ ಮಾಪನ ಯೋಜನೆಯಡಿ ರೈತರಿಗೆ ಜಮೀನಿನ ಆರ್ ಟಿಸಿ ದಾಖಲೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಇದು ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ದೆಹಲಿಗೆ ಕಳುಹಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಇಂಟೆಲಿಜೆನ್ಸ್ ನವರು ವರದಿ ಕಳುಹಿಸುವುದು ಬಾಕಿ ಇದೆ. ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳಿಗೆ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದೇನೆ. ನಂತರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆಯಾಗಲಿದೆ. ರಾಮನಗರವನ್ನು ಜಿಲ್ಲಾ ಕೇಂದ್ರವಾಗಿಯೇ ಉಳಿಯಲಿದೆ. ಹೀಗಾಗಿ ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ” ಎಂದು ಮನವಿ ಮಾಡಿದರು.

“ನಾವು ಬೆಂಗಳೂರಿನವರು, ನಮ್ಮ ಈ ಗುರುತನ್ನು ನಾವು ಯಾಕೆ ಬಿಟ್ಟುಕೊಡಬೇಕು? ಭವಿಷ್ಯದಲ್ಲಿ ನಿಮ್ಮ ಜಮೀನಿನ ಬೆಲೆ ಏನಾಗುತ್ತದೆ ಎಂದು ನೀವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹಳ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಹಾಗಿದ್ದರೆ ಇವರುಗಳು ತಮ್ಮ ಊರು ಬಿಟ್ಟು ಇಲ್ಲಿಗೆ ಬಂದು ಯಾಕೆ ನೂರಾರು ಎಕರೆ ಜಮೀನು ಖರೀದಿ ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.

“ಭೂ ವ್ಯಾಜ್ಯಗಳಿಂದಾಗಿ ಜನ ಪೊಲೀಸ್ ಠಾಣೆಗೆ ಹೋಗಬಾರದು, ಬಡವರು ಲಂಚ ನೀಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಮರು ಭೂ ಮಾಪನ ಕಾರ್ಯಕ್ರಮವನ್ನು ಇಡೀ ತಾಲೂಕಿಗೆ ವಿಸ್ತರಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ನೂರಾರು ವರ್ಷಗಳ ಹಿಂದೆ ಬ್ರಿಟೀಷರು ಈ ಭಾಗದಲ್ಲಿ ಭೂ ಮಾಪನ ಮಾಡಿದ್ದರು. ಆನಂತರ ಮಾಡಿರಲಿಲ್ಲ. ಈಗ ಹೊಸ ಮಾದರಿಯಲ್ಲಿ ಭೂ ಮಾಪನ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ಇದು ಮುಂದಿನ ತಲೆಮಾರಿಗೂ ಬಹಳ ಉಪಯೋಗವಾಗಲಿದೆ ಎಂದು ತಿಳಿಸಿದರು.

“ನಮ್ಮ ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿವೆ. ಅದರಲ್ಲಿ 2 ಗ್ರಾಮ ಅರಣ್ಯ ಭಾಗದಲ್ಲಿದೆ. ಉಳಿದ 33 ಗ್ರಾಮಗಳಲ್ಲಿ 5,804 ಸರ್ವೆ ನಂಬರ್ ಗಳಿದ್ದವು. ಈಗ  23,469 ಸಾವಿರ ಸರ್ವೆ ನಂಬರ್ ಗಳಾಗಿವೆ. ಈಗ ಈ ಪಂಚಾಯ್ತಿಯಲ್ಲಿ ಮರು ಭೂ ಮಾಪನ ಮಾಡಲಾಗಿದ್ದು, ಮುಂದೆ ಇಡೀ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಈ ಕಾರ್ಯಕ್ರಮ ವಿಸ್ತರಣೆಯಾಗಲಿದೆ” ಎಂದು ತಿಳಿಸಿದರು.

“ನಾನು ಶಾಸಕನಾದ ನಂತರ 8 ಸಾವಿರ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಮಾಡಿ ಜಮೀನು ಹಂಚಿದ್ದೇನೆ. ಈ ಕಾರ್ಯಕ್ರಮದ ಮಹತ್ವ ನಿಮಗೆ ಅರ್ಥವಾಗುವುದಿಲ್ಲ. ನೀವು ಬೆಂಗಳೂರು ಭಾಗದಲ್ಲಿ ಒಂದು ಎಕರೆ ಭೂಮಿಯ ಪೋಡಿ ಮಾಡಿಸಲು 3-5 ಲಕ್ಷ ಖರ್ಚು ಮಾಡಬೇಕಾಗಿದೆ. ಲಂಚ ನೀಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದರು.

“ನಿಮ್ಮ ಜಮೀನಿನ ದಾಖಲೆಯಲ್ಲಿ ತಪ್ಪುಗಳಾಗಿದ್ದರೆ ಅದನ್ನು ತಿದ್ದುಕೊಳ್ಳಲು ಒಂದು ತಿಂಗಳು ಕಾಲಾವಕಾಶವಿದೆ. ಪಹಣಿ ಹಾಗೂ ಭೂ ನಕ್ಷೆ ಒಂದೇ ದಾಖಲೆಯಲ್ಲಿ ಬರುತ್ತಿದೆ. ಕೃಷ್ಣ ಅವರ ಕಾಲದಲ್ಲಿ ಭೂಮಿ ಯೋಜನೆ ಮೂಲಕ 5 ರೂಪಾಯಿಗೆ ಗಣಕೀಕೃತ ಪಹಣಿ ನೀಡುವ ಭೂಮಿ ಯೋಜನೆ ಮಾಡಲಾಗಿತ್ತು. ಈಗ ಬೆಂಗಳೂರಿನಲ್ಲಿ ಎಲ್ಲಾ ಆಸ್ತಿಗಳ ಸರ್ವೆ ಮಾಡಿಸಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಆಮೂಲಕ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದೇನೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments