ನವದೆಹಲಿ: ಭಾರತೀಯ ರೈಲ್ವೇಸ್ ಸಂಸ್ಥೆಯು ದೇಶೀಯವಾಗಿ ಹೈಡ್ರೋಜನ್ ಶಕ್ತ ಇಂಜಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಇದರೊಂದಿಗೆ ಭಾರತವು ಇಂತಹ ಎಂಜಿನ್ ತಯಾರಿಸುವ ಶಕ್ತಿ ಹೊಂದಿರುವ ನಾಲ್ಕನೇ ದೇಶವಾಗಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲ್ವೆ ಇಂಜಿನ್ ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿದೆ. ಸಾಮಾನ್ಯವಾಗಿ ಹೈಡ್ರೋಜನ್ ಶಕ್ತ ಟ್ರೈನ್ ಇಂನಿನ್ ಸಾಮರ್ಥ್ಯ 500ರಿಂದ 600 ಅಶ್ವಶಕ್ತಿ ಇರುತ್ತದೆ.
ಭಾರತೀಯ ರೈಲ್ವೆಯು 1,200 ಅಶ್ವಶಕ್ತಿ ಇರುವ ಇಂಜಿನ್ ಅನ್ನು ಅಭಿವೃದ್ಧಿಪಡಿಸಿದೆ. ಅದೂ ದೇಶೀಯವಾಗಿ ಇದನ್ನು ತಯಾರಿಸಿರುವುದು ವಿಶೇಷ.
1200 ಅಶ್ವಶಕ್ತಿಯ ಎಂಜಿನ್ ಉಳ್ಳ ಹೈಡ್ರೋಜನ್ ರೈಲು ಸದ್ಯದಲ್ಲೇ ಹರಿಯಾಣದ ಜಿಂದ್ ಮತ್ತು ಸೋನಿಪತ್ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಸಂಚರಿಸುವ ನಿರೀಕ್ಷೆ ಇದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಅವರ ಪ್ರಕಾರ, ಎಂಜಿನ್ನ ತಯಾರಿಕೆ ಪೂರ್ಣಗೊಂಡಿದ್ದು, ಸಿಸ್ಟಂ ಸಮೀಕರಣ ಕಾರ್ಯ ಪ್ರಗತಿಯಲ್ಲಿದೆ.
ತಂತ್ರಜ್ಞಾನ ಅಭಿವೃದ್ದಿಯು ಒಂದು ದೇಶಕ್ಕೆ ಆತ್ಮವಿಶ್ವಾಸ ತಂದುಕೊಡುತ್ತದೆ. ಅದರಲ್ಲೂ ದೇಶೀಯವಾಗಿ ಅಭಿವೃದ್ಧಿಯಾಗುವ ತಂತ್ರಜ್ಞಾನದಿಂದ ಸಾಕಷ್ಟು ಪ್ರಯೋಜನಗಳಿವೆ.
ಹೈಡ್ರೋಜನ್ ಶಕ್ತ ಎಂಜಿನ್ ಅನ್ನು ಈ ಮಟ್ಟದಲ್ಲಿ ಅಭಿವೃದ್ಧಿಪಡಿಸಬಲ್ಲೆವೆಂದರೆ ಈ ತಂತ್ರಜ್ಞಾನವನ್ನು ಟ್ರಕ್, ಟಗ್ಬೋಟ್ ಇತ್ಯಾದಿಗೆ ಅಳವಡಿಸುವ ನಿರೀಕ್ಷೆ ಇರುತ್ತದೆ ಎಂದಿದ್ದಾರೆ ಸಚಿವರು.
ಭಾರತೀಯ ರೈಲ್ವೇ ಅಗ್ಗದ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ವಂದೇ ಭಾರತ್ ರೈಲುಗಳು ತುಸು ದುಬಾರಿ ಎನಿಸಿವೆ. ಈಗ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಉನ್ನತೀಕರಿಸಲಾಗುತ್ತಿದೆ.
ಇವು ಅಗ್ಗದ ದರಕ್ಕೆ ಉತ್ತಮ ಪ್ರಯಾಣ ಅನುಭವ ನೀಡುತ್ತವೆ. ಇತ್ತೀಚೆಗ ರೈಲ್ವೆ ಸಚಿವ ವೈಷ್ಣವ್ ಚೆನ್ನೈನಲ್ಲಿರುವ ಐಸಿಎಫ್ ಫ್ಯಾಕ್ಟರಿಗೆ ಹೋಗಿ ಅಮೃತ್ ಭಾರತ್ 2.0 ರೈಲು ಬೋಗಿಗಳ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದ್ದಾರೆ.
ದೀರ್ಘಾವಧಿ ಪ್ರಯಾಣದಲ್ಲಿ ಆರಾಮವಾಗಿ ಕೂರಲು ಮತ್ತು ಮಲಗಲು ಅನುಕೂಲವಾಗುವಂತಹ ರೀತಿಯ ಸೀಟುಗಳು, ಮೊಬೈಲ್ ಚಾರ್ಜಿಂಗ್ ಕೊಂಡಿಗಳು ಇಲ್ಲಿ ಲಭ್ಯವಿರಲಿದೆ. ಎಲ್‌ಇಡಿ ಲೈಟಿಂಗ್, ಸಿಸಿಟಿವಿ ಕ್ಯಾಮೆರಾಗಳು, ಲಗೇಜುಗಳನ್ನಿರಿಸಲು ದೊಡ್ಡ ರ್ಯಾಕುಗಳು ಇತ್ಯಾದಿ ಸೌಲಭ್ಯಗಳನ್ನು ಅಮೃತ್ ಭಾರತ್‌ನ ಹೊಸ ಆವೃತ್ತಿಯ ಬೋಗಿಗಳಲ್ಲಿ ಕಾಣಬಹುದು.