ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ವಿರಾಮ ಹಾಕುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಒಪ್ಪಂದದ ಕರಡು ಸಿದ್ಧಪಡಿಸಲಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ಮರಳುವ ಸಾಧ್ಯತೆ ದಟ್ಟವಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗಷ್ಟೇ ದೂರವಾಣಿ ಮೂಲಕ ಚರ್ಚೆ ಮಾಡಿದ್ದರು. ಈಗಾಗಲೇ ಹತ್ತಾರು ತಿಂಗಳಿನಿಂದಲೂಸ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿದೆ. ಯುದ್ಧಕ್ಕೆ ಬ್ರೇಕ್ ಹಾಕುವ ಒಪ್ಪಂದವು ಇನ್ನೇನು ಆಗಿಯೇ ಹೋಯ್ತು ಅನ್ನುವಷ್ಟರಲ್ಲಿ ‘ಅಹಂ’ ಎದುರಾಗಿತ್ತು.
ಇಸ್ರೇಲಿನ ವಿದೇಶಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಬೈಡನ್ ಅವರ ಉನ್ನತ ಸಲಹೆಗಾರ ಬ್ರೆಟ್ ಮೆಕ್ಗುರ್ಕ್ ಇಬ್ಬರೂ ಕತಾರ್ ರಾಜಧಾನಿ ದೋಹಾದಲ್ಲಿದ್ದಾರೆ. ಅಲ್ಲಿಯೂ ಒಪ್ಪಂದದ ಬಗ್ಗೆ ಅಂತಿಮ ಚರ್ಚೆಗಳು ನಡೆದಿವೆ. ಈಗ ಇಸ್ರೇಲ್, ಹಮಾಸ್ ಎರಡೂ ಕಡೆಯವರಿಗೆ ಪ್ರಸ್ತುತಪಡಿಸಬೇಕಾದ ಅಂತಿಮ ವಿವರಗಳನ್ನು ಸಿದ್ಧಪಡಿಸಲಾಗಿದೆ.
ಇನ್ನು ಟ್ರಂಪ್ ಅಧಿಕಾರ ಸ್ವೀಕಾರ ಜನವರಿ 20ರಂದು ನಡೆಯಲಿದ್ದು, ಅದಕ್ಕೂ ಮುಂಚೆಯೇ ಕದನ ವಿರಾಮ ಒಪ್ಪಂದಗಳು ಪೂರ್ಣಗೊಂಡರೆ, ಬೈಡನ್ ಪ್ರಯತ್ನವೂ ಇತಿಹಾಸದಲ್ಲಿ ಉಳಿಯಲಿದೆ.
ಎರಡನೇ ಕದನ ವಿರಾಮ
ಸತತ ಹದಿನೈದು ತಿಂಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಒಂದೇ ಒಂದು ಬಾರಿ ಮಾತ್ರ ಅಲ್ಪಾವಧಿಗೆ ಕದನ ವಿರಾಮ ಕೈಗೂಡಿತ್ತು.
ಯುದ್ಧ ವಿರಾಮ ಆಗೋಕೆ ಏನೆಲ್ಲಾ ನಿಯಮಗಳಿಗೆ ಹಮಾಸ್ ಮತ್ತು ಇಸ್ರೇಲ್ ಒಪ್ಪಿಕೊಳ್ಳಬೇಕು, ಯಾವುದು ಇರಬೇಕು, ಯಾವುದನ್ನು ತೆಗೆಯಬೇಕು ಅನ್ನೋ ಎಲ್ಲ ಅಂಶಗಳ ಬಗ್ಗೆಯೂ ಮಧ್ಯರಾತ್ರಿ ಮಾತುಕತೆ ನಡೆದಿದೆ.
ಕತಾರ್ನ ರಾಜಧಾನಿ ದೋಹಾದಲ್ಲಿ ಇಸ್ರೇಲ್ ಗುಪ್ತಚರ ಮುಖ್ಯಸ್ಥ, ನಿಯೋಜಿತ ಅಧ್ಯಕ್ಷ ಟ್ರಂಪ್ ಅವರ ಮಧ್ಯಪ್ರಾಚ್ಯದ ರಾಯಭಾರಿ ಹಾಗೂ ಕತಾರ್‌ನ ಪ್ರಧಾನಿ ಒಟ್ಟಿಗೆ ಸೇರಿ ಗೌಪ್ಯ ಮಾತುಕತೆಯನ್ನು ನಡೆಸಿದರು ಎಂದು ಹೇಳಲಾಗಿದೆ.