ಬೀದರ್ ನಲ್ಲಿ ಎಟಿಎಂ ಹಣ ದರೋಡೆ ಘಟನೆ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹಾಡುಹಗಲೇ ಬಂದೂಕು ತೋರಿಸಿ ಬ್ಯಾಂಕ್ ದರೋಡೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಉಳ್ಳಾಲದ ಕೆಸಿ ರಸ್ತೆಯಲ್ಲಿರುವ ಕೋಟೆಕಾರು ಬ್ಯಾಂಕ್ ಗೆ ನುಗ್ಗಿದ 5 ಮಂದಿ ಮುಸುಕುಧಾರಿಗಳಾಗಿದ್ದ ದುಷ್ಕರ್ಮಿಗಳು ಬಂದೂಕು ತೋರಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಬೆದರಿಸಿ ಲಕ್ಷಾಂತರ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಕಾರಣ ಹೆಚ್ಚಿನ ಪೊಲೀಸರು ಭದ್ರತೆಗೆ ತೆರಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ದರೋಡೆಗೆ ಸಂಚು ರೂಪಿಸಿದ್ದಾರೆ ಎಂದು ಹೇಳಲಾಗಿದೆ.
ದರೋಡೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಶ್ವಾನದಳ ಭೇಟಿ ನೀಡಿದ್ದು, ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ದರೋಡೆ ಸುದ್ದಿ ತಿಳಿಯುತ್ತಿದ್ದಂತೆ ಸ್ಪೀಕರ್ ಯುಟಿ ಖಾದರ್ ಬ್ಯಾಂಕ್ ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೆಸಿ ರೋಡ್ನ ಕೋಟೆಕಾರು ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆಯಾಗಿದೆ ಎಂದರು.
ತಲ್ವಾರ್, ಗನ್ನಿಂದ ಬೆದರಿಸಿ ಬ್ಯಾಂಕ್ ದರೋಡೆ ಮಾಡಿದ ಮಾಹಿತಿ ದೊರೆತಿದೆ. ಜನಸಂದಣಿ ಕಡಿಮೆ ಇರುವ ಸಮಯದಲ್ಲೇ ದರೋಡೆ ನಡೆಸಿದ್ದಾರೆ. ಆರೋಪಿಗಳ ಬಂಧಿಸಲು ವಿಶೇಷ ತಂಡ ರಚನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.