ರಾಜ್ಯ ಸರ್ಕಾರ 2109ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಬುಧವಾರ ರಾಜ್ಯ ಸರ್ಕಾರ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಪೈಲ್ವಾನ್ ಚಿತ್ರದ ಅಭಿನಯಕ್ಕಾಗಿ ಕಿಚ್ಚ ಸುದೀಪ್ ಹಾಗೂ ತ್ರಯಂಬಕಂ ಚಿತ್ರದ ಅಭಿನಯಕ್ಕಾಗಿ ಅನುಪಮಾ ಗೌಡ ಅವರಿಗೆ ಶ್ರೇಷ್ಠ ನಟ ಹಾಗೂ ಶ್ರೇಷ್ಠ ನಟಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ ಟೆಲ್ ಚಿತ್ರ ಎರಡನೇ ಅತ್ಯುತ್ತಮ ಚಿತ್ರ ಹಾಗೂ ಆರ್ಘ್ಯಂ ಚಿತ್ರ ಮೂರನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
ವಿಶೇಷ ಸಾಮಾಜಿಕ ಕಳಕಳಿಯ ಚಿತ್ರವಾಗಿ ಎಸ್. ಮಂಜುನಾಥ್ ನಿರ್ದೇಶನದ ಕನ್ಹೇರಿ ಹಾಗೂ ಡಾ.ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಗ್ಲೆಂಡ್ v/s ಇಂಗ್ಲೆಂಡ್ ಚಿತ್ರಗಳು ಉತ್ತಮ ಮನರಂಜನಾ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿವೆ.
ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೆಮಿಸ್ಟ್ರೀ ಆಫ್ ಕರಿಯಪ್ಪ ಚಿತ್ರಕ್ಕಾಗಿ ತಬಲಾ ನಾಣಿ ಹಾಗೂ ಬ್ರಾಹ್ಮಿ ಚಿತ್ರಕ್ಕಾಗಿ ಅನೂಷಾ ಕೃಷ್ಣ ಅವರಿಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಕಥೆ ಪ್ರಶಸ್ತಿ ಇಲ್ಲಿ ಇರಲಾರೆ, ಅಲ್ಲಿ ಹೋಗಲಾರೆ ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಅವರಿಗೆ ಲಭಿಸಿದೆ. ಅತ್ಯುತ್ತಮ ಸಂಭಾಷಣೆಗಾಗಿ ಅಮೃತಮತಿ ಚಿತ್ರಕ್ಕಾಗಿ ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರಶಸ್ತಿ ದೊರೆತಿದೆ. ಯಜಮಾನ ಚಿತ್ರದ ಸಂಗೀತಕ್ಕಾಗಿ ಹರಿಕೃಷ್ಣ ಅವರಿಗೆ ಪ್ರಶಸ್ತಿ ದೊರೆತಿದೆ.