Home ರಾಜ್ಯ ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಅರಣ್ಯ ಅಪರಾಧ ತಡೆಗೆ ಆನ್ ಲೈನ್ ಎಫ್ಐಆರ್ ಗೆ ಚಾಲನೆ

ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಅರಣ್ಯ ಅಪರಾಧ ತಡೆಗೆ ಆನ್ ಲೈನ್ ಎಫ್ಐಆರ್ ಗೆ ಚಾಲನೆ

ಬೆಂಗಳೂರಿನಲ್ಲಿ ಮಂಗಳವಾರ ಅರಣ್ಯ ಇಲಾಖೆ Wild Life Trust of India (WTI) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಗರುಡಾಕ್ಷಿ ಆನ್‌ಲೈನ್ / ಡಿಜಿಟಲ್ FIR ವ್ಯವಸ್ಥೆಗೆ ಚಾಲನೆ

by Editor
0 comments
eshwar khandre

ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಇತ್ಯಾದಿ ಅರಣ್ಯ ಅಪರಾಧಗಳಿಗೆ ಇನ್ನು ಮುಂದೆ ಗರುಡಾಕ್ಷಿ ಅಸ್ತ್ರ ಪ್ರಯೋಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಅರಣ್ಯ ಇಲಾಖೆ Wild Life Trust of India (WTI) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಗರುಡಾಕ್ಷಿ ಆನ್‌ಲೈನ್ / ಡಿಜಿಟಲ್ FIR ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೆಚ್ಚುತ್ತಿರುವ ಅರಣ್ಯ ಅಪರಾಧ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಾತ್ರಿಪಡಿಸಲು ಹಾಗೂ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.

online fir

online fir

ತಾವು ಅರಣ್ಯ ಸಚಿವರಾದ ಬಳಿಕ ಇಲಾಖೆಯಲ್ಲಿ ಹಂತ ಹಂತವಾಗಿ ಸುಧಾರಣೆ ತರುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಇರುವ ರೀತಿಯಲ್ಲೇ ಅರಣ್ಯ ಇಲಾಖೆಯ್ಲೂ ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿಗೆ ತರಲು ತಂತ್ರಾಂಶ ರೂಪಿಸುವಂತೆ 22.09.2023ರಲ್ಲಿಯೇ ಸೂಚನೆ ನೀಡಿದ್ದೆ, ಇಂದು ಅದು ಕಾರ್ಯರೂಪಕ್ಕೆ ಬಂದಿದೆ ಎಂದರು.

ಈ ತಂತ್ರಾಂಶ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ.

banner

ಪ್ರಸ್ತುತ ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ (Pilot) ಜಾರಿಗೊಳಿಸಲಾಗುತ್ತದೆ. ಈ ತಂತ್ರಾಂಶದ ಕಾರ್ಯನಿರ್ವಹಣೆಯ ಬಗ್ಗೆ ಕ್ಷೇತ್ರ ಮಟ್ಟದ ಪ್ರತಿಕ್ರಿಯೆ ಆಧಾರದ ಮೇಲೆ ಇನ್ನೂ ಹೆಚ್ಚು ಕ್ರಿಯಾಶೀಲಗೊಳಿಸಿ ಹಂತ ಹಂತವಾಗಿ ರಾಜ್ಯದ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು ಮತ್ತು ಆಫ್.ಐ.ಆರ್. ಅನ್ನೂ ಗರುಡಾಕ್ಷಿ ತಂತ್ರಾಂಶದ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

ಗರುಡಾಕ್ಷಿ ಆನ್ ಲೈನ್ ಎಫ್..ಆರ್. ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ ಅಪರಾಧ ತಡೆಯಲು ಇಲಾಖೆಗೆ ಬಲ ತುಂಬುತ್ತದೆ.
ಇಷ್ಟು ದಿನ ಎ-4 ಹಾಳೆಯ ಅರ್ಧಭಾಗದಷ್ಟು ಅಳತೆಯ ಎಫ್.ಐ.ಆರ್. ನಲ್ಲಿ ಕಾರ್ಬನ್ ಶೀಟ್ ಹಾಕಿ ಕೈಬರಹದಲ್ಲಿ ಪ್ರಕರಣ ದಾಖಲಿಸಲಾಗುತ್ತಿತ್ತು. ಸಾವಿರಾರು ಪ್ರಕರಣಗಳು ದಾಖಲಾದರೂ ಎಷ್ಟು ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಲಾಗತ್ತಿದೆ ಎಂದು ಕಾಲ ಕಾಲಕ್ಕೆ ಮೇಲ್ವಿಚಾರಣೆ ಮಾಡಲು ಆಗುತ್ತಿರಲಿಲ್ಲ. ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿ ಆದ ಮೇಲೆ ಎಷ್ಟು ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಲಾಗಿದೆ, ಇಲ್ಲ ಎಂಬುದು ತಿಳಿಯುತ್ತದೆ. ಇದನ್ನು ಇಲಾಖೆಯ ಅಧಿಕಾರಿಗಳು ತಾವು ಕುಳಿತ ಜಾಗದಿಂದಲೇ ಎಲ್ಲ ವಲಯಗಳ ಅರಣ್ಯ ಅಪರಾಧ ಪ್ರಕರಣಗಳ ಬಗ್ಗೆ ನಿಗಾ ಇಡಬಹುದು ಎಂದರು.

ಅಪರಾಧಿಗಳಿಗೆ ಶಿಕ್ಷೆ ಖಚಿತ:

ಅರಣ್ಯ ಅಪರಾಧ ಕುರಿತಂತೆ ದೂರು ಕೊಟ್ಟವರಿಗೆ ಎಫ್.ಐ.ಆರ್. ಪ್ರತಿ ಲಭಿಸಲಿದೆ, ಜೊತೆಗೆ ಜಾರ್ಜ್ ಶೀಟ್ ಹಾಕಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಅವಕಾಶ ಆಗುತ್ತದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಕೂಡಲೇ ನ್ಯಾಯಾಲಯದಲ್ಲಿ ಅಪರಾಧ ಸಂಖ್ಯೆ (ಸಿಸಿ ನಂಬರ್) ದಾಖಲಾಗುತ್ತದೆ, ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ವಿವರಿಸಿದರು.

ಅರಣ್ಯ ಭೂಮಿ ಒತ್ತುವರಿ, ಅಕ್ರಮ ಮರ ಕಡಿತಲೆ, ವನ್ಯಜೀವಿಗಳ ಅಕ್ರಮ ಬೇಟೆಗೆ ಸಂಬಂಧಿಸಿದಂತೆ ಆನ್ ಲೈನ್ ಎಫ್.ಐ.ಆರ್. ಹಾಕಿದರೆ, ಚಾರ್ಜ್ ಶೀಟ್ ಹಾಕಲೇ ಬೇಕಾಗತ್ತದೆ. ಲಾಂಗ್ ಪೆಂಡೆನ್ಸಿ ಇರಲು ಸಾಧ್ಯವಿಲ್ಲ. ಈ ಬಗ್ಗೆ ಹೈಕೋರ್ಟ್ ಕೂಡ ಸೂಚನೆ ನೀಡುತ್ತದೆ. ಇದರಿಂದ ಭೂ ಕಬಳಿಕೆದಾರರಿಗೆ ಶಿಕ್ಷೆ ಆಗುತ್ತದೆ. ಹೀಗಾಗಿ ಅರಣ್ಯ ಅಪರಾಧಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತದೆ ಎಂದರು.

ವಲಯ ಅರಣ್ಯಾಧಿಕಾರಿ (ಆರ್.ಎಫ್.ಓ.)ಗಿಂತ ಕಡಿಮೆ ದರ್ಜೆಯ ಅಧಿಕಾರಿಗಳು ಈ ಹಿಂದೆ ಎಫ್.ಐ.ಆರ್. ಹಾಕುತ್ತಿದ್ದರು. ತಾಂತ್ರಿಕ ಕಾರಣದ ಮೇಲೆ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗುತ್ತಿತ್ತು. ಇನ್ನು ಮುಂದೆ ಹಾಗೆ ಆಗಲು ಸಾಧ್ಯವಿರುವುದಿಲ್ಲ. ಈ ತಂತ್ರಾಂಶದಲ್ಲಿ ಆರ್.ಎಫ್.ಓ. ಡಿಜಿಟಲ್ ಸಹಿ ಇರುತ್ತದೆ ಎಂದರು.

ಅರಣ್ಯ ಭೂಮಿ ತನ್ನ ಸ್ವರೂಪ ಕಳೆದುಕೊಂಡಿದ್ದರೂ ಮತ್ತೆ ಅರಣ್ಯ ಬೆಳೆಸಬಹುದು. ಆದರೆ ಅರಣ್ಯಕ್ಕೆ ಭೂಮಿಯೇ ಇಲ್ಲದಿದ್ದರೆ ಅರಣ್ಯ ಬೆಳೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅರಣ್ಯ ಒತ್ತುವರಿ ಆಗದಂತೆ ತಡೆಯಲು ಆನ್ ಲೈನ್ ಎಫ್.ಐ.ಆರ್. ಕ್ರಾಂತಿಕಾರಿ ಹೆಜ್ಜೆಯಾಗುತ್ತದೆ.

ಏನು ಪ್ರಯೋಜನ:

ಈ ತಂತ್ರಾಂಶದಲ್ಲಿ ಪ್ರಕರಣಗಳ ದಾಖಲಿಸುವಿಕೆ, ತನಿಖೆ ಮತ್ತು ಅಂತಿಮ ನಿರ್ಣಯದವರೆಗಿನ ಪ್ರತಿ ಹಂತವನ್ನು ನಿರ್ವಹಿಸಲು ಆಸ್ಪದ ಕಲ್ಪಿಸಲಾಗಿದ್ದು ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಗತಿಯನ್ನು ಉಸ್ತುವಾರಿ ಮಾಡಲು ಸಹಕಾರಿಯಾಗಿರುತ್ತದೆ.
ಪ್ರಕರಣಗಳ ನಿರ್ವಹಣೆಯಲ್ಲಿ ದಾಖಲಿಸಬೇಕಿರುವ ಮತ್ತು ಸಲ್ಲಿಸಬೇಕಿರುವ ವಿವಿಧ ವರದಿ ಮತ್ತು ನಮೂನೆಗಳನ್ನು ತಂತ್ರಾಂಶದಲ್ಲಿ ಸ್ವಯಂ ಸೃಜನೆಗೊಳ್ಳುವಂತೆ (Auto generate) ಅಭಿವೃದ್ಧಿಪಡಿಸಲಾಗಿದ್ದು, ಅಧಿಕಾರಿಗಳು ತ್ವರಿತವಾಗಿ, ವಿಳಂಬವಿಲ್ಲದೇ ಕಾರ್ಯ ನಿರ್ವಹಿಸಲು ಅನುವು ಮಾಡಿರುತ್ತದೆ.

ಬಳಕೆದಾರ-ಸ್ನೇಹಿ (user friendly) ಉಪಕ್ರಮವು ಅರಣ್ಯ ಕಾನೂನು ಜಾರಿ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಟ್ರ್ಯಾಕಿಂಗ್ ಮಾಡಲು ಅವಕಾಶವಿರುವ ಸಿಸ್ಟಮ್ ಆಗಿದ್ದು ಇಲಾಖೆಯ ಕಾರ್ಯಾಚರಣೆಗಳನ್ನು ಆಧುನೀಕರಿಸಲು ಮತ್ತು ಉತ್ತಮಗೊಳಿಸಲು ಹೆಚ್ಚು ಪರಿಣಾಮಕಾರಿಯಾದ ಪರಿಹಾರವಾಗಿದೆ.

ಇಲಾಖೆಯ ವಿವಿಧ ಘಟಕಗಳಲ್ಲಿ ಈಗಾಗಲೇ ದಾಖಲಿಸಲಾಗಿರುವ ಹಾಗೂ ಹಾಲಿ ಚಾಲ್ತಿಯಲ್ಲಿರುವ ಪ್ರಕರಣಗಳನ್ನು ಗಣಕೀಕರಿಸಲು ಮೊದಲ ಹಂತದಲ್ಲಿ ಕ್ರಮಕೈಗೊಳ್ಳಲಾಗಿದ್ದು, “Legacy Module” ಅನ್ನು ಜಾರಿ ಮಾಡಲಾಗಿರುತ್ತದೆ ಮತ್ತು ಪ್ರಕರಣಗಳನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ, ಈಗಾಗಕೆ 40000 ಪ್ರಕರಣದ ದಾಖಲೀಕರಣ ಆಗಿದೆ ಎಂದು ತಿಳಿಸಿದರು.

ಮುಂದಿನ ಹೆಗ್ಗುರುತಾಗಿ Online Forest Offence Registration ಮಾಡ್ಯೂಲ್ ಅಭಿವೃದ್ಧಿಪಡಿಸಲಾಗಿದ್ದು ಇದರಡಿ ಅರಣ್ಯ/ವನ್ಯಜೀವಿ ಅಪರಾಧ ಪ್ರಕರಣಗಳನ್ನು ಆನ್ ಲೈನ್ ಮೂಲಕ ದಾಖಲಿಸಲು, ನ್ಯಾಯಾಲಯದ ಅನುಮತಿಗಳನ್ನು ಪಡೆಯಲು, ಜಪ್ತಿಗಳನ್ನು ನಿರ್ವಹಿಸಲು, ಆಪಾದಿತರ ದಸ್ತಗಿರಿ ಚರ್ಯೆಗಳನ್ನು ದಾಖಲಿಸಲು ಅವಕಾಶವಿರುತ್ತದೆ ಎಂದರು.

Live Offence Registration Module ನಿಯೋಜನೆಯೊಂದಿಗೆ ತನಿಖೆ (Investigation) ಮತ್ತು ವರದಿ ಹಾಗೂ ವಿಶ್ಲೇಷಣೆ (Reporting and Analytics) ಮಾಡ್ಯೂಲ್‌ಗಳನ್ನು ಕೂಡ ಅಭಿವೃದ್ಧಿಪಡಿಸಿ ನಿಯೋಜಿಸಲು ಹಂತ ಹಂತವಾಗಿ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ.

ಜೊತೆಗೆ ಅರಣ್ಯ ಅಪರಾಧಗಳ ಕುರಿತಂತೆ ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸದೊಂದಿಗೆ ಲಾಗ್ಇನ್ ಆಗಿ ಆನ್ ಲೈನ್ ಮೂಲಕವೇ ದೂರು ದಾಖಲಿಸಲೂ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಆರೋಗ್ಯಕರ ಸ್ಪರ್ಧೆ:

ಯಾವ ವಲಯದಲ್ಲಿ ಹೆಚ್ಚು ಆನ್ ಲೈನ್ ಎಫ್.ಐ.ಆರ್. ದಾಖಲಿಸಿ, ನಿಗದಿತ ಕಾಲಮಿತಿಯೊಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುತ್ತಾರೋ ಆ ವಲಯದ ಆರ್.ಎಫ್.ಓ.ಗಳಿಗೆ ಬಡ್ತಿ ನೀಡುವಾಗ, ಇದನ್ನು ದಕ್ಷತೆಯ ಮಾನದಂಡವಾಗಿ ಪರಿಗಣಿಸಲೂ ಅನುಕೂಲ ಆಗುತ್ತದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪ್ರವೇಜ್, ಅರಣ್ಯಪಡೆ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್, ವನ್ಯ ಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಮತ್ತಿತರರು ಹಾಜರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ವಾಹನ ಸವಾರರಿಗೆ ಬಿಗ್ ಶಾಕ್: ವಾಹನ ಮಾರಿದ 14 ದಿನದಲ್ಲಿ ದಾಖಲೆ ವರ್ಗಾವಣೆ ಕಡ್ಡಾಯ! ಹುಚ್ಚು ಹುಚ್ಚಾಗಿ ಮಾತನಾಡೋ ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು: ರೇಣುಕಾಚಾರ್ಯ ಫಿನಾಲೆ ಹೊಸ್ತಿಲಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಧನರಾಜ್! ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಂಧ್ರ ಡಿಸಿಎಂ? ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೆ ಪ್ರತಿಭಟನೆ ಬಿಸಿ: ಬೀದಿಗಿಳಿದ ಸಾವಿರಾರು ಅಮೆರಿಕನ್ನರು ಫೆ.14ರಂದು ರೈತರ ಬೇಡಿಕೆ ಚರ್ಚೆಗೆ ಕೇಂದ್ರ ಒಪ್ಪಿಗೆ: ವೈದ್ಯ ನೆರವು ಪಡೆಯಲು ಜಗಜೀತ್ ಒಪ್ಪಿಗೆ ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿರಿಸಿದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ: ಮೊದಲ ಫೋಟೊ ಬಿಡುಗಡೆ ಕೇಂದ್ರ ಆದಿವಾಸಿ ಜನಜಾತಿ ನ್ಯಾಯ ಅಭಿಯಾನಕ್ಕೆ ಮಂಡ್ಯದ ಪೂವನಹಳ್ಳಿ ಆಯ್ಕೆ: ಎಚ್.ಡಿ. ಕುಮಾರಸ್ವಾಮಿ ಘೋಷಣೆ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅಜ್ಜಿ, ಚಿಕ್ಕಪ್ಪ ಅಪಘಾತದಲ್ಲಿ ದುರ್ಮರಣ ಮಹಾಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ: ಹಲವು ಶಿಬಿರಗಳಿಗೆ ವ್ಯಾಪಿ