ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈನ ಸ್ಥಳೀಯ ಕೋರ್ಟ್ ದುಬಾರಿ ದಂಡ ವಿಧಿಸಿದ್ದು, ಪಾವತಿಸಲು ತಪ್ಪಿಸಿದರೆ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ಮಂಗಳವಾರ ತೀರ್ಪು ಪ್ರಕಟಿಸುವ ವೇಳೆ ಕಡ್ಡಾಯ ಹಾಜರಾತಿ ಇರಬೇಕು ಎಂಬ ಸೂಚನೆ ಇದ್ದರೂ ಗೈರು ಹಾಜರಾದ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಕಮರ್ಷಿಯಲ್ ಚಿತ್ರಗಳಿಗೆ ಹೆಸರಾಗಿದ್ದ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿ ಮಾಡುತ್ತಿದ್ದಾರೆ.
ಮುಂದಿನ ಮೂರು ತಿಂಗಳಲ್ಲಿ ದೂರುದಾರರಿಗೆ ರೂ.3.72 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಪರಿಹಾರವನ್ನು ಪಾವತಿಸಲು ವಿಫಲವಾದಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 3 ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
2018ರಲ್ಲಿ ಮುಂಬೈನಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಆ ಸಮಯದಲ್ಲಿ ಮಹೇಶ್ಚಂದ್ರ ಮಿಶ್ರಾ ಎಂಬ ವ್ಯಕ್ತಿ ರಾಮಗೋಪಾಲ್ ವರ್ಮಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಏಳು ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿತ್ತು. ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆರ್ಜಿವಿಗೆ ನೋಟಿಸ್ ನೀಡಿದರೂ ಅವರು ಕೋರ್ಟ್ಗೆ ಬಂದಿರಲಿಲ್ಲ.