Saturday, July 4, 2026
Google search engine
Homeದೇಶಮಧ್ಯರಾತ್ರಿ ಮುಖ್ಯ ಚುನಾವಣಾಧಿಕಾರಿ ನೇಮಕ: ರಾಹುಲ್ ಗಾಂಧಿ ಕಿಡಿ

ಮಧ್ಯರಾತ್ರಿ ಮುಖ್ಯ ಚುನಾವಣಾಧಿಕಾರಿ ನೇಮಕ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ‘ಮಧ್ಯರಾತ್ರಿಯ ನಿರ್ಧಾರ’ವನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಡೆ ‘ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕುವ ಮೂಲಕ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಮೂವರು ಸದಸ್ಯರ ಸಮಿತಿಯ ಭಾಗವಾಗಿರುವ ರಾಹುಲ್ ಗಾಂಧಿ ಅವರು ಈ ಸಮಯದಲ್ಲಿ ಹೊಸ ಸಿಇಸಿ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಆದಾಗ್ಯೂ, ಪ್ರಕ್ರಿಯೆಯನ್ನು ನಿಲ್ಲಿಸುವುದು ಎಂದರೆ ಪ್ರಮುಖ ಹುದ್ದೆಯನ್ನು ಖಾಲಿ ಬಿಡುವುದು ಎಂದರ್ಥವಾದ್ದರಿಂದ ಕೇಂದ್ರವು ಅದನ್ನು ಲೆಕ್ಕಿಸದೆ ಮುಂದುವರಿಯಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಇದಾದ ಕೆಲವೇ ಗಂಟೆಗಳಲ್ಲಿ ರಾಜೀವ್ ಕುಮಾರ್ ಅವರ ಸ್ಥಾನಕ್ಕೆ ಕುಮಾರ್ ಅವರನ್ನು ಹೊಸ ಸಿಇಸಿಯಾಗಿ ನೇಮಿಸಲಾಯಿತು.

“ನೂತನ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಈ ವೇಳೆ ನಾನು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನನ್ನ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟವಾಗಿ ತಿಳಿಸಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ನನ್ನ ನಿರ್ಧಾರ ಅಚಲವಾಗಿದೆ..” ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.

ಚುನಾವಣಾ ಆಯುಕ್ತ ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು, ಸ್ವತಂತ್ರ ಚುನಾವಣಾ ಆಯೋಗದ ಅತ್ಯಂತ ಮೂಲಭೂತ ಅಂಶವಾಗಿರಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಟ್ವೀಟ್‌

“ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಸಮಿತಿಯಿಂದ ತೆಗೆದುಹಾಕುವ ಮೂಲಕ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಲಕ್ಷಾಂತರ ಮತದಾರರ ಕಳವಳವನ್ನು ಉಲ್ಬಣಗೊಳಿಸಿದೆ..” ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

“ಲೋಕಸಭೆಯ ವಿಪಕ್ಷ ನಾಯಕನಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ನಮ್ಮ ರಾಷ್ಟ್ರದ ಸಂಸ್ಥಾಪಕ ನಾಯಕರ ಆದರ್ಶಗಳನ್ನು ಎತ್ತಿ ಹಿಡಿಯುವುದು ಮತ್ತು ಸರ್ಕಾರವನ್ನು ಪ್ರಶ್ನಿಸುವುದು ನನ್ನ ಕರ್ತವ್ಯ. ಸಮಿತಿಯ ರಚನೆ ಮತ್ತು ಪ್ರಕ್ರಿಯೆಯನ್ನೇ ಸುಪ್ರೀಂಕೋರ್ಟಲ್ಲಿ ಪ್ರಶ್ನಿಸಲಾಗಿದೆ. ಅಲ್ಲದೇ ಮುಂದಿನ ೪೮ ಗಂಟೆಗಳಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ.

ಈ ಮಧ್ಯೆ ತರಾತುರಿಯಲ್ಲಿ ಹೊಸ ಸಿಇಸಿ ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ..” ಎಂದು ರಾಹುಲ್ ಗಾಂಧಿ ಜರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments