ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ರಂಗಕರ್ಮಿ ಬ್ಯಾಂಕ್ ಜನಾರ್ದನ್ ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ದನ್ ತಡರಾತ್ರಿ 2:30ರ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 – 4 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರ, ಹಾಸ್ಯ ನಟರಾಗಿ ನಟಿಸಿದ್ದ ಬ್ಯಾಂಕ್ ಜನಾರ್ದನ್ ಸಾಕಷ್ಟು ನಾಟಕಗಳಲ್ಲೂ ನಟಿಸಿದ್ದರು. ಅಲ್ಲದೇ ಕಿರುತೆರೆಯ ಹಲವು ಧಾರವಾಹಿಗಳಲ್ಲೂ ನಟಿಸಿದ್ದರು.
80 ಮತ್ತು 90ರ ದಶಕದಲ್ಲಿ ಬಹುಬೇಡಿಕೆಯ ನಟರಾಗಿದ್ದ ಜನರ್ದನ್ ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ಮಗ, ಸೂಪರ್ ನನ್ಮಗ ಚಿತ್ರಗಳ ಮೂಲಕ ಹೆಚ್ಚು ಖ್ಯಾತಿ ಪಡೆದರೆ, ಜಗ್ಗೇಶ್ ಅವರಿಗೆ ಸಿನಿಮಾನದಲ್ಲಿ ಕಾಯಂ ತಂದೆ ಆಗಿ ಜನಪ್ರಿಯರಾಗಿದ್ದರು.
ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಹ್ಮಣ್ಯ, ಕೌರವ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ. ಮಾಂಗಲ್ಯ, ರೋಬೋ ಫ್ಯಾಮಿಲಿ, ಪಾಪ ಪಾಂಡು, ಜೋಕಾಲಿ ಸೇರಿದಂತೆ ಹಲವು ಧಾರವಾಹಿಗಳಲ್ಲೂ ನಟಿಸಿದ್ದಾರೆ.
ಬ್ಯಾಂಕ್ ಜನಾರ್ದನ್ ನಿಧನಕ್ಕೆ ನಿರ್ದೇಶಕ ಉಪೇಂದ್ರ, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಸೇರಿದಂತೆ ಹಲವು ನಟ-ನಟಿಯರು ಶೋಕ ವ್ಯಕ್ತಪಡಿಸಿದ್ದಾರೆ.



