ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಸಂಬವಿಸಿದ ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಯೋಜಿಸಲಾಗಿದ್ದ ಆರ್ ಸಿಬಿ ತಂಡದ ಸಂಭ್ರಮಾಚರಣೆಗೆ ಆಗಮಿಸಿದ್ದ 11 ಅಭಿಮಾನಿಗಳು ಕಾಲ್ತುಳಿಯಕ್ಕೆ ಬಲಿಯಾಗಿದ್ದು, 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಮೃತ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದರು. ಅಲ್ಲದೇ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಪ್ರಕಟಿಸಿದರು.
ಸರ್ಕಾರ ಪ್ರಾಯೋಜಿತ ಕಾರ್ಯಕ್ರಮ ಅಲ್ಲ. ನಮ್ಮ ಕಾರ್ಯಕ್ರಮ 15 ನಿಮಿಷದಲ್ಲಿ ಮುಗಿಸಿದ್ದೇವೆ. ಘಟನೆ ಬಗ್ಗೆ ನಮಗೂ ಆಘಾತವಾಗಿದೆ. ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ದುರಂತ ಸಂಭವಿಸಿದೆ ಎಂದು ಅವರು ಹೇಳಿದರು.
ದುರಂತದ ಬಗ್ಗೆ ಜಿಲ್ಲಾಧಿಕಾರಿ ಮಟ್ಟದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35 ಸಾವಿರ ಆಸನ ಸಾಮರ್ಥ್ಯ ಹೊಂದಿದೆ. ಆದರೆ 2 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು ಎಂದು ಅವರು ನುಡಿದರು.



