ಈ ಬಾರಿ 11 ದಿನ ವಿಜೃಂಭಣೆಯಿಂದ ಮೈಸೂರು ದಸರಾ ಆಚರಿಸಲು ನಿರ್ಧಾರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ದಸರಾ ಪೂರ್ಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ 9 ದಿನಗಳ ಕಾಲ ದಸರಾ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಅಧಿಕ ಪಂಚಮಿ ಬಂದಿರುವ ಕಾರಣ 11 ದಿನ ದಸರಾ ಆಚರಣೆಗೆ ನಿರ್ಧರಿಸಲಾಗಿದೆ ಎಂದರು.
ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆ ಬೆಳೆ ಆಗಿದೆ. ಇದರಿಂದ ರೈತರು ಕೂಡ ಸಂತಸಗೊಂಡಿದ್ದಾರೆ. ಅಲ್ಲದೇ ಅಧಿಕ ಪಂಚಮಿ ಬಂದಿರುವ ಕಾರಣ 11 ದಿನ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಈ ಹಿಂದೆ 8 ಬಾರಿ ಬಾರಿ 11 ದಿನಗಳ ಕಾಲ ದಸರಾ ಆಚರಿಸಿದ ಉದಾಹರಣೆ ಇದೆ ಎಂದು ಅವರು ಹೇಳಿದರು.
ಈ ಬಾರಿ ದಸರಾದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. 21 ದಿನಗಳ ಕಾಲ ಮೈಸೂರಿನಲ್ಲಿ ದೀಪಾಲಂಕಾರ ಇರಲಿದೆ. ಕಳೆದ ಬಾರಿ ದಸರಾ ಆಚರಣೆಗೆ 40 ಕೋಟಿ ರೂ. ಖರ್ಚಾಗಿದ್ದು, ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಸ್ತು ಪ್ರದರ್ಶನಕ್ಕೆ ಮೊದಲ ದಿನವೇ ಭರ್ತಿ ಆಗುವಂತೆ ನೋಡಿಕೊಳ್ಳಲಾಗುವುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ನೂಕುನುಗ್ಗಲು ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅಲ್ಲದೇ ಪೊಲೀಸರು ಜನಸ್ನೇಹಿಯಾಗಿ ವರ್ತಿಸುವಂತೆ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.



