ಬೆಂಗಳೂರು: ತೈಲ ದರ ಏರಿಕೆಯ ಪರಿಣಾಮದ ಬೀಸಿ ಎದುರಿಸುತ್ತಿರುವ ವಿಮಾನಯಾನ ಸಂಸ್ಥೆಗಳು 250ಕ್ಕೂ ಅಧಿಕ ದೇಶೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಿದೆ.
ಭಾರತದ ಪ್ರತಿಷ್ಟಿತ ವಾಯುಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಇಂಡಿಗೋ ಕಳೆದ ಜೂನ್‌ನಿಂದ ಸುಮಾರು 250 ದೈನಂದಿನ ದೇಶೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಿದೆ. ಇದರಲ್ಲಿ ಬಹುತೇಕ ವಿಮಾನಗಳು ಬೆಂಗಳೂರಿಗೆ ಸಂಪರ್ಕ ಹೊಂದಿದ ವಿಮಾನಗಳಾಗಿವೆ.
ಮಧ್ಯಪ್ರಾಚ್ಯದ ತೈಲ ಬಿಕ್ಕಟ್ಟಿನಿಂದಾಗಿ ಇಂಧನ ವೆಚ್ಚ ದುಬಾರಿಯಗುತ್ತಿದೆ. ಇತ್ತ ಪ್ರಯಾಣಿಕರ ಸಂಖ್ಯೆ ಕೂಡ ಕುಸಿಯುತ್ತಿರುವುದರಿಂದ ಕಂಪನಿಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ. ವಿಮಾನಯಾನದ ಪ್ರಯಾಣದರ ಕೂಡ ಹೆಚ್ಚಳ ಆಗಿದೆ. ಮುಂದಿನ ಆಗಸ್ಟ್ ವರೆಗೂ ತೈಲ ಬಿಕ್ಕಟ್ಟು ಮುಂದುವರೆಯುವ ಸಾಧ್ಯತೆ ಇರುವುದರಿಂದ ವಿಮಾನಯಾನ ಸಂಸ್ಥೆಗಳು ವೆಚ್ಚ ಕಡಿತಕ್ಕೆ ಮುಂದಾಗಿದೆ.
ಬೇಸಿಗೆ ರಜೆ, ಪಾರ್ಟಿ ಹಾಗೂ ಇನ್ನಿತರ ಕಾರಣಗಳಿಗಾಗಿ ವಿಮಾನ ಪ್ರಯಾಣ ಕೈಗೊಳ್ಳುವ ಹೊತ್ತಿನಲ್ಲೇ ವಿಮಾನಗಳನ್ನ ಕಡಿಗೊಳಿಸಿರುವುದು ಪ್ರವಾಸೋದ್ಯಮಕ್ಕೂ ಹೊಡೆತ ನೀಡಿದಂತಾಗಿದೆ.
ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಏರ್ ಇಂಡಿಯಾ ತನ್ನ ದೇಶೀಯ ವಿಮಾನ ಸಂಚಾರ ವೇಳಾಪಟ್ಟಿಯಲ್ಲಿ ಶೇ.22 ರಷ್ಟು ಕಡಿತಗೊಳಿಸಿದೆ. ಈ ಮೂಲಕ ಪ್ರತಿದಿನ ಸುಮಾರು 110 ವಿಮಾನಗಳ ಹಾರಾಟ ಕಡಿತಗೊಳಿಸಿದಂತಾಗುತ್ತದೆ. ಈ ಹಿಂದೆ ಈ ಸಂಸ್ಥೆಯಿಂದ 500 ವಿಮಾನಗಳು ದೇಶದಲ್ಲಿ ಹಾರಾಟ ನಡೆಸುತ್ತಿದ್ದವು.
ಇಂಡಿಗೋ ಸಂಸ್ಥೆಯಿಂದ ದಿನಕ್ಕೆ ಸುಮಾರು 2,200 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇದೀಗ ಇಂಡಿಗೋ ಸಂಸ್ಥೆ ಶೇ.5-7 ರಷ್ಟು ಕಡಿತಗೊಳಿಸಲು ಮುಂದಾಗಿದೆ. ಇದರ ಪರಿಣಾಮವಾಗಿ ದಿನಕ್ಕೆ 110 ವಿಮಾನಗಳು ಕಡಿಮೆಯಾಗಿವೆ.
ಈ ನಡುವೆ ಏರ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ ಮತ್ತು ಆಲ್-ಎಕಾನಮಿ ಕ್ಲಾಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಡಿಮೆ ವೆಚ್ಚದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಸುಮಾರು 340 ರಷ್ಟು ದೈನಂದಿನ ದೇಶೀಯ ವಿಮಾನ ಹಾರಾಟದಲ್ಲಿ ಶೇ.10 ರಷ್ಟು ಕಡಿತಗೊಳಿಸಿದೆ.



