Monday, May 25, 2026
Google search engine
Homeರಾಜ್ಯಜುಲೈ 3ರವರೆಗೆ ಮುಂಗಾರು ಆರ್ಭಟ: ಕೊಡಗು ರೆಡ್ ಅಲರ್ಟ್ ಘೋಷಣೆ

ಜುಲೈ 3ರವರೆಗೆ ಮುಂಗಾರು ಆರ್ಭಟ: ಕೊಡಗು ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆಯ ಅಬ್ಬರ ಜುಲೈ 3ರವರೆಗೆ ಮುಂದುವರಿಯಲಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಗೆ ರೆಡ್ ಅಲರ್ಟ್​ ಘೋಷಣೆ ಮಾಡಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಮತ್ತು ಬೆಳಗಾವಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ.

ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ವಿಜಯನಗರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅವಧಿಗೂ ಮುನ್ನವೇ ಆರಂಭಗೊಂಡ ಮುಂಗಾರು ಮಳೆ ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಅಬ್ಬರಿಸುತ್ತಿದ್ದು, ರಾಜ್ಯದ ಬಹುತೇಕ ಜಲಾಶಯಗಳು ಅವಧಿಗೂ ಮುನ್ನವೇ ಭರ್ತಿಯಾಗುವ ಮುನ್ಸೂಚನೆ ನೀಡಿದೆ.

ಕೆಆರ್ ಎಸ್ ಜಲಾಶಯ 84 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭರ್ತಿಯಾಗಿದ್ದು, 50 ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿದೆ. ಇದೇ ರೀತಿ ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾಗಿದೆ. ದಕ್ಷಿಣ ಕರ್ನಾಟಕದ ತುಂಗಾಭದ್ರ ಹಾಗೂ ಉತ್ತರ ಕರ್ನಾಟಕದ ಕೃಷ್ಣ ನದಿಗಳು ಕೂಡ ತುಂಬಿ ಹರಿಯುತ್ತಿದ್ದು, ಕೃಷಿ ಚಟುವಟಿಕೆ ಆರಂಭಗೊಂಡಿವೆ.

ಶೃಂಗೇರಿ, ಕೊಪ್ಪ, ವಿರಾಜಪೇಟೆ, ಕೊಟ್ಟಿಗೆಹಾರ, ಬೆಳ್ತಂಗಡಿ, ಯಲ್ಲಾಪುರ, ಕ್ಯಾಸಲ್​ರಾಕ್, ಖಾನಾಪುರ, ಸೋಮವಾರಪೇಟೆ, ಪೊನ್ನಂಪೇಟೆ, ಸಿದ್ದಾಫುರ ಹಾಗೂ ಬನವಾಸಿಯಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ. ಕಾರ್ಕಳ, ಬಂಟವಾಳ, ಸುಳ್ಯ, ಗೇರುಸೊಪ್ಪ, ಹೊನ್ನಾವರ, ಮಾಣಿ, ಶಕ್ತಿನಗರ, ಕುಂದಾಪುರ, ಮೂಡುಬಿದಿರೆ, ಅಂಕೋಲಾ, ಬೆಳಗಾವಿ, ಆನವಟ್ಟಿ, ಸರಗೂರು, ಅಫ್ಝಲ್​ಪುರ, ಮಂಕಿ, ಹಳಿಯಾಳ, ಮುಂಡಗೋಡು, ಪುತ್ತೂರು, ಉಡುಪಿ, ಗೋಕರ್ಣ, ಶಿರಾಲಿ, ಮಂಗಳೂರು, ಕೋಟಾ, ಬೀದರ್, ಕಿತ್ತೂರು, ಹಾವೇರಿ, ಚಿಂಚೋಳಿ, ಧಾರವಾಡ, ಹುಬ್ಬಳ್ಳಿ, ಹಿರೆಕೆರೂರು, ಕಲಬುರಗಿ, ಗುಬ್ಬಿ, ಜಗಳೂರು, ಭದ್ರಾವತಿ, ಕೋಣನೂರಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಗಾಳಿ ಜೊತೆಗೆ ಆಗಾಗ ಬಿಸಿಲು ಬಂದು ಹೋಗಲಿದೆ. ಬೆಂಗಳೂರು ನಗರದಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments