ಮೈಸೂರು: . ನಮ್ಮ ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಯಾರೂ ಏನೂ ಹೇಳಿದರೂ ಕೇಳುವುದಿಲ್ಲ ಎಂದರು.
ಈ ಬಾರಿ ದಸರಾ ನನ್ನ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೊಸ ಸಿಎಂ ದಸರಾ ಉದ್ಘಾಟಿಸುತ್ತಾರೆ ಎಂಬ ಹೇಳಿಕೆಗೆ ನೇರವಾಗಿ ತಿರುಗೇಟು ನೀಡಿದರು.
ಸುರ್ಜೆವಾಲಾ ಅಭಿಪ್ರಾಯ ಪಡೆಯಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಸುರ್ಜೆವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ ಅವರು ಅಭಿಪ್ರಾಯ ಕೇಳಿ, ಅವರ ಕೆಲಸವನ್ನು ಮಾಡುತ್ತಾರೆ ಎಂದರು.
ಬಿಜೆಪಿ ಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು
ಸಿದ್ದರಾಮಯ್ಯ ಅವರು ಈ ಬಾರಿಯ ದಸರಾ ಉದ್ಘಾಟಿಸುವುದಿಲ್ಲ ಎಂದು ಬಿಜೆಪಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಶ್ರೀರಾಮುಲು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಅವರು ಹೇಗೆ ಭವಿಷ್ಯ ನುಡಿಯುತ್ತಾರೆ ಎಂದು ಪ್ರಶ್ನಿಸಿದರು.
2018 ರಲ್ಲಿ ನ್ಯಾಯಮಂಡಳಿ ಆದೇಶದ ಪ್ರಕಾರ 177.25 ಟಿ ಎಂ ಸಿ ನೀರನ್ನು ಹಂಚಿಕೆ ಮಾಡಿದೆ. ಒಂದು ವರ್ಷ ಬಿಟ್ಟರೆ, ಕಳೆದ ವರ್ಷ ತಮಿಳುನಾಡಿಗೆ 305 ಟಿ ಎಂ.ಸಿ ನೀರು ಕೊಟ್ಟಿದ್ದೇವೆ ಈ ಬಾರಿಯೂ ಕೊಡುತ್ತೇವೆ ಎಂದರು. ಈ ತಿಂಗಳಲ್ಲಿ 9 ಟಿಎಂಸಿ ನೀರು ಬಿಡಬೇಕಿದ್ದರೂ ನಾವು ಈ ತಿಂಗಳಲ್ಲಿ 22 ಟಿಎಂಸಿ ನೀರು ಒದಗಿಸಿದ್ದೇವೆ. ಕಡಿಮೆ ಕೊಟ್ಟಿರುವುದು ಒಂದೋ ಎರಡು ವರ್ಷ ಮಾತ್ರ. ಆದರೆ ಬಹುತೇಕ ಹೆಚ್ಚಿನ ನೀರು ತಮಿಳುನಾಡಿಗೆ ನೀಡಿದ್ದೇವೆ ಎಂದರು.
177.25 ಟಿಎಂಸಿ ನೀರು ಕೊಡಲು ನಮ್ಮ ತಕರಾರಿಲ್ಲ. ಹೆಚ್ಚಾಗಿ ನೀರು ಕೊಡುತ್ತಿದ್ದೇವೆ. ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವಾಯರ್ ನ್ನು ಅದಕ್ಕಾಗಿಯೇ ಮಾಡಬೇಕೆಂಬ ಉದ್ದೇಶವಿದೆ. ಸಂಕಷ್ಟದ ವರ್ಷಗಳಲ್ಲಿ ಮಾತ್ರ ಹಂಚಿಕೆ ಮಾಡಬೇಕು ಎಂದು ಹೇಳಿದರು. ದ್ವಿಭಾಷಾ ಸೂತ್ರಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದವರು ಮೇಕೆದಾಟು ಅಣೆಕಟ್ಟಿಗೆ ಅನುಮತಿ ಕೊಡಬೇಕು ಎಂದರು. ರಾಜ್ಯದಲ್ಲಿ ಮೇಕೆದಾಟು ಸಂಬಂಧಿಸಿದಂತೆ ಕಚೇರಿಯನ್ನು ತೆರೆಯಲಾಗಿದ್ದು ಭೂ ಸ್ವಾಧೀನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿಯೂ ಇದನ್ನು ಪ್ರಸ್ತುತಪಡಿಸಿದೆ. 6% ರಷ್ಟು ನೀರಾವರಿ ಪ್ರದೇಶವನ್ನು ರಾಜ್ಯದಲ್ಲಿ ಹೆಚ್ಚಳ ಮಾಡಿದ್ದು, ಇದಕ್ಕಾಗಿ 1ಕೋಟಿ ರೂ.ಗಳನ್ನು ಮಂಡ್ಯ ಕ್ಕೆ ವಿನಿಯೋಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಸಮುದಾಯ ಹೃದಯಾಘಾತದಿಂದ ಮೃತಪಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕಾರಣವೇನು ಎಂದು ಪತ್ತೆ ಹಚ್ಚಿ ಪರಿಹಾರ ಮಾರ್ಗೋಪಾಯಗಳನ್ನು ಅನುಸರಿಸಬೇಕು. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.


