ಬೆಂಗಳೂರು: ಚಿಕ್ಕಪ್ಪನ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಅಣ್ಣನ ಮಗಳು ಹಾಗೂ ಆಕೆಯ ಸ್ನೇಹಿತ, ಕಾನೂನು ವಿದ್ಯಾರ್ಥಿ ಸೇರಿ ನಾಲ್ವರನ್ನು ಕೊತ್ತನೂರು ಪೊಲೀಸರು ಬಂಧಿಸಿ 10 ಲಕ್ಷ ನಗದು ಸೇರಿ 65 ಲಕ್ಷ ಮೌಲ್ಯದ 548 ಗ್ರಾಂ ಚಿನ್ನ, ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಕೊತ್ತನೂರಿನ ಸಚಿತಾ (20),ಯಶವಂತ್ (20) ಕಸವನಹಳ್ಳಿಯ ರಾಮ್ ಪ್ರಕಾಶ್ (22) ಕೊತ್ತನೂರಿನ ತನುಷ್ (23) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಾದ ಸಚಿತಾ ಹಾಗೂ ಯಶವಂತ್ ರೇವಾ ಕಾಲೇಜಿನ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ರಾಮ್ ಪ್ರಕಾಶ್ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದ ಎಂದು ಹೇಳಿದರು.
ಕೊತ್ತನೂರಿನ ಭೈರತಿ ಗ್ರಾಮದ ನಾರಪ್ಪ ರೆಡ್ಡಿ ಕಳೆದ ಜನವರಿಯಲ್ಲಿ ಮನೆಯ ಕೊಠಡಿಯ ಲಾಕರ್ನನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕೊನೆಯದಾಗಿ ನೋಡಿ ಮೇ ಮಾಹೆಯಲ್ಲಿ ಲಾಕರ್ ತೆಗೆದು ನೋಡಲಾಗಿ, ಚಿನ್ನಾಭರಣಗಳು ಕಳುವಾಗಿರುವುದು ಕಂಡುಬಂದಿದ್ದು, ಮನೆಯಲ್ಲಿ ಕೆಲಸಮಾಡುತ್ತಿದ್ದ ಇಬ್ಬರು ಕೆಲಸಗಾರರ ಮೇಲೆ ಅನುಮಾನ ಪಟ್ಟು ನೀಡಿದ ದೂರಿನ ಮೇಲೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಅಣ್ಣನ ಮಗಳನ್ನು ಠಾಣೆಗೆ ಕರೆಸಿ, ಆಕೆಯನ್ನು ವಿಚಾರಣೆಗೊಳಪಡಿಸಲಾಗಿ, ಆಕೆಯು ಸ್ನೇಹಿತನೊಂದಿಗೆ ಸೇರಿಕೊಂಡು ಈ ಕೃತ್ಯವೆಸಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ.
ಕಳವು ಮಾಡಿದ ಕೆಲವು ಚಿನ್ನಾಭರಣಗಳನ್ನು ಆಕೆಯು ಮತ್ತಿಬ್ಬರ ಸ್ನೇಹಿತರಿಗೆ ನೀಡಿ ಅವುಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾರ್ಪಡಿಸಿ, ಮಾರಾಟ ಮಾಡಿ ಹಣವನ್ನು ಪಡೆಯುತ್ತಿದ್ದುದ್ದಾಗಿ ತಿಳಿಸಿರುತ್ತಾಳೆ. ಮತ್ತು ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಮತ್ತಿಬ್ಬರು ಸ್ನೇಹಿತರ ಬಗ್ಗೆಯೂ ಸಹ ಮಾಹಿತಿಯನ್ನು ನೀಡಿರುತ್ತಾಳೆ. ಆದೇ ದಿನ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತನೋರ್ವನನ್ನು ಆತನು ವಾಸವಿರುವ ಕೊತ್ತನೂರಿನ ಮನೆಯಿಂದ ವಶಕ್ಕೆ ಪಡೆಯಲಾಗಿದೆ.
ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಮತ್ತಿಬ್ಬರು ಸ್ನೇಹಿತರನ್ನು ಗುಬ್ಬಿ ಸರ್ಕಲ್ ಬಳಿ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಮೂವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಪ್ರಕರಣದಲ್ಲಿ ಕಳವು ಮಾಡಿದ ಚಿನ್ನಾಭರಣಗಳ ಪೈಕಿ, ಸ್ವಲ್ಪ ಚಿನ್ನಾಭರಣಗಳನ್ನು ಕರಗಿಸಿ, ಚಿನ್ನದ ಗಟ್ಟಿಯನ್ನಾಗಿ ಮಾರ್ಪಡಿಸಿ, ಚಿಕ್ಕಪೇಟೆಯ ಎರಡು ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ಉಳಿದ ಚಿನ್ನಾಭರಣ ಹಾಗೂ ನಗದನ್ನು ಕೊತ್ತನೂರಿನ ವಾಸವಿರುವ ಆರೋಪಿಗಳಿಬ್ಬರ ಮನೆಯಲ್ಲಿಟ್ಟಿರುವುದಾಗಿ ತಿಳಿಸಿರುತ್ತಾರೆ. ಚಿಕ್ಕಪೇಟೆಯ ಎರಡು ಜ್ಯೂವೆಲರಿ ಅಂಗಡಿಗಳಿಂದ ಮತ್ತು ಕೊತ್ತನೂರಿನಲ್ಲಿ ವಾಸವಿರುವ ಆರೋಪಿಗಳಿಬ್ಬರ ವಾಸದ ಮನೆಯಿಂದ ಒಟ್ಟು 548 ಗ್ರಾಂಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ಮತ್ತು 10 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಹೇಳಿದರು.
ಡಿಸಿಪಿ ವಿ.ಜೆ.ಸಜೀತ್ ರವರ ಮಾರ್ಗದರ್ಶನದಲ್ಲಿ ಕೊತ್ತನೂರು ಪೊಲೀಸ್ ಇನ್ಸ್ಪೆಕ್ಟರ್.ಎಂ.ಎಲ್.ಚೇತನ್ ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.



