ಸಂಸದ ಅಸಾಸುದ್ದೀನ್ ಓವೈಸಿ ಪಕ್ಷದ ಮುಖಂಡ ಹಾಗೂ ಮಹಾರಾಷ್ಟ್ರದ ಮಲೆಗಾಂವ್ ಪಾಲಿಕೆಯ ಮಾಜಿ ಮೇಯರ್ ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ ಘಟನೆ ನಾಸಿಕ್ ನಲ್ಲಿ ನಡೆದಿದೆ.
ದುಷ್ಕರ್ಮಿಗಳು 3 ಸುತ್ತು ಗುಂಡು ಹಾರಿಸಿದ್ದರಿಂದ ಆಲ್ ಇಂಡಿಯಾ ಮಜಿಲಿಸ್ ಇ-ಇತೆಹದುಲ್ ಮುಸ್ಲೀನ್ ಪಕ್ಷದ ನಾಯಕ ಅಬ್ದುಲ್ ಮಲಿಕ್ ಅಹಮದ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಬ್ದುಲ್ ಮಲಿಕ್ ಅಹಮದ್ ಅವರ ಎದೆಯ ಎಡಭಾಗಕ್ಕೆ ಮತ್ತು ಬಲಗೈಗೆ ಗುಂಡು ತಗುಲಿದ್ದು, ನಾಸಿಕ್ ನಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಮುಂಜಾನೆ 1.20ರ ಸುಮಾರಿಗೆ ಓಲ್ಡ್ ಆಗ್ರಾ ಬಳಿಯ ಅಂಗಡಿಯೊಂದರ ಬಳಿ ಕುಳಿತಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಯಾರನ್ನೂ ಇದುವರೆಗೆ ಬಂಧಿಸಿಲ್ಲ.