ಇನ್ಫೋಸಿಸ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಬೆಂಗಳೂರಿನ ಎಸ್‍ಜಿ.ಪಾಳ್ಯದಲ್ಲಿ ಗರ್ಭಿಣಿಯಾಗಿದ್ದ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲಗಿದ ಸ್ಥಿತಿಯಲ್ಲಿಯೇ ಶವ ಪತ್ತೆಯಾಗಿದ್ದು, ಎಸ್ ಜಿ ಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿಲ್ಪಾ ಮತ್ತು ಪ್ರವೀಣ್ ಎರಡು ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಮಗುವಿದೆ.
ಶಿಲ್ಪಾಗಳ ಮದುವೆಗೆ ಪೋಷಕರು 50 ಲಕ್ಷ ರೂ. ಖರ್ಚು ಮಾಡಿದ್ದರು. ಒಂದು ವರ್ಷದ ಹಿಂದೆ ಕೆಲಸ ತ್ಯಜಿಸಿದ್ದರು. ಚಾಟ್ ಅಂಗಡಿ ಓಪನ್ ಮಾಡಲ ಹಣ ತರುವಂತೆ ಪ್ರವೀಣ್ ಹಾಗೂ ಅವರ ಕುಟುಂಬದವರು ಒತ್ತಡ ಹಾಕುತ್ತಿದ್ದರು ಎಂದು ಹೇಳಲಾಗಿದೆ.
ಶಿಲ್ಪಾ ಮನೆಯವರಿಂದ 5 ಲಕ್ಷ ರೂ. ಪಡೆದು ನೀಡಿದ್ದಳು. ಆದರೆ ಇದು ಸಾಕಾಗುವುದಿಲ್ಲ ಎಂದು ಪತಿ ಪ್ರವೀಣ್, ತಾಯಿ ಹಾಗೂ ನಾದಿನಿ ಪ್ರಿಯಾ ಕಾಟ ನೀಡುತ್ತಿದ್ದು ಹೆಚ್ಚು ಹಣ ತಂದುಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಶಿಲ್ಪಾಳನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಪ್ರವೀಣ್ ಬಿಂಬಿಸುತ್ತಿದ್ದಾನೆ ಎಂದು ಆಕೆಯ ಕುಟುಂಬಸ್ಥರು, ಆರೋಪಿಸಿದ್ದಾರೆ. ಎಸ್‍ಜಿ ಪಾಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರವೀಣ್‍ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಮಗ್ರ ವಿಚಾರಣೆಯ ಬಳಿಕ ನಿಜವಾದ ಕಾರಣ ಏನು ಎಂಬುದು ತಿಳಿದು ಬರಲಿದೆ.
ಪೊಲೀಸರು ಶಿಲ್ಪಾ ಅವರ ಸಾವಿನ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಶಿಲ್ಪಾ ಅವರ ಮೊಬೈಲ್ ಫೋನ್, ಕುಟುಂಬದವರೊಂದಿಗಿನ ಸಂವಹನಗಳು ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರವೀಣ್‌ನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304B (ವರದಕ್ಷಿಣೆ ಸಾವು) ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



