ದಸರಾದ ಅಂತಿಮ ದಿನ ದೇವಿ ದುರ್ಗಾ ಮೂರ್ತಿಗಳ ವಿಸರ್ಜನೆ ವೇಳೆ ಸಂಭವಿಸಿದ ಎರಡು ಪ್ರತ್ಯೇಕ ದುರಂತದಲ್ಲಿ 10 ಮಕ್ಕಳು ಸೇರಿದಂತೆ 13 ಮಂದಿ ಅಸುನೀಗಿದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.
ಉಜ್ಜಯಿನಿಯ ಇಂಗೋರಿಯಾದಲ್ಲಿ ಭಕ್ತರು ತುಂಬಿದ್ದ ಟ್ರ್ಯಾಕ್ಟರ್ ಚಂಬಲ್ ನದಿಗೆ ಮಗುಚಿಬಿದ್ದ ಪರಿಣಾಮ 12 ಮಂದಿ ನೀರಿಗೆ ಬಿದ್ದಿದ್ದಾರೆ. ಇದರಲ್ಲಿ 11 ಮಂದಿಯನ್ನು ಮಾತ್ರ ಹೊರಗೆ ತೆರೆಯಲಾಗಿದ್ದು, ಇದರಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಾಗ ಮೃತಪಟ್ಟಿದ್ದಾರೆ.
12 ವರ್ಷದ ಬಾಲಕ ಇಗ್ನಿಷಿಯಸ್ ಕೀ ತಿರುಗಿಸಿದ್ದರಿಂದ ಟ್ರ್ರ್ಯಾಕ್ಟರ್ ದಿಢೀರನೆ ಮುಂದಕ್ಕೆ ಹೋಗಿ ನದಿಗೆ ಉರುಳಿದೆ. ಇದರಿಂದ ದುರಂತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕ್ರೇನ್ ಮೂಲಕ ಟ್ರ್ಯಾಕ್ಟರ್ ಹೊರಗೆ ತೆಗೆಯಲಾಗಿದ್ದು, ನಂತರ ನಾಪತ್ತೆಯಾದ ಮಗುವಿನ ಶೋಧ ಕಾರ್ಯ ನಡೆದಿದೆ.
ಮತ್ತೊಂದು ದುರ್ಘಟನೆ ಖಾಂಡ್ವಾ ಜಿಲ್ಲೆಯ ಪಂಡಾನಾ ಟೆಹ್ಸಿಲ್ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಆದ್ರಲಾ ಮತ್ತು ಜಮಾಲಿ ಗ್ರಾಮದ 20ರಿಂದ 25 ಗ್ರಾಮಸ್ಥರು ದುರ್ಗಾ ಮೂರ್ತಿ ವಿಸರ್ಜನೆಗೆ ಹೋಗುತ್ತಿದ್ದಾಗ ಹೊಂಡಕ್ಕೆ ಟ್ರ್ಯಾಕ್ಟರ್ ಉರುಳಿಬಿದ್ದಿದೆ. ಹೊಂಡದಿಂದ 11 ಶವಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ 8 ಮಂದಿ ಬಾಲಕಿಯರು ಎಂದು ತಿಳಿದು ಬಂದಿದೆ.
ದುರ್ಘಟನೆಗೆ ಮುಖ್ಯಮಂತ್ರಿ ಮೋಹನ್ ಯಾದವ್ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಘೋಷಿಸಿದ್ದಾರೆ. ಅಲ್ಲದೇ ಸಮೀಪದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.



