ತೀವ್ರ ಹಗ್ಗಜಗ್ಗಾಟದ ನಂತರ ಕೊನೆಗೂ ಬಿಹಾರ ವಿಧಾನಸಭಾ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮಗೊಂಡಿದ್ದು, ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಪಕ್ಷಗಳು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗಿದ್ದು, ಬಿಜೆಪಿ 101 ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 101 ಮತ್ತು ಚಿರಾಗ್ ಪಾಸ್ವಾನ್ ನಾಯಕತ್ವದ ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್ ಪಾಸ್ವನ್ ಬಣ) 29, ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಹಿಂದೂಸ್ತಾನಿ ಆವಮ್ ಮೋರ್ಚಾ ತಲಾ 6 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸುದೀರ್ಘ ಸಭೆಯ ನಂತರ ಸೀಟು ಹಂಚಿಕೆಯನ್ನು ಘೋಷಣೆ ಮಾಡಿದ್ದು, ಸೋಮವಾರ ಅಧಿಕೃತವಾಗಿ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಲಿದ್ದಾರೆ.
2020ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 110 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. ಪಾಸ್ವನ್ ಬಣ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಪಾಸ್ವನ್ ಬಣ ಸೇರ್ಪಡೆಯಿಂದಾಗಿ ಜೆಡಿಯು 14 ಹಾಗೂ ಬಿಜೆಪಿ 9 ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಂತಾಗಿದೆ.



