ಬೆಂಗಳೂರಿನ ಪಿಜಿ ಹಾಸ್ಟೇಲ್ ನಲ್ಲಿ ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಮಡಿಕೇರಿ ಮೂಲದ ಸನಾ ಪರ್ವಿನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಇದೇ ಕಾಲೇಜಿನ ಹಿರಿಯ ವಿದ್ಯಾರ್ಥಿ ಕೇರಳ ಮೂಲದ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದರಿಂದ ಸನಾ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪ ಕೇಳಿಬಂದಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಯುವಕ, ಪಿಜಿ ಮತ್ತು ಕಾಲೇಜು ಬಳಿ ಬಂದು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ. ಕಳೆದ 10 ತಿಂಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಯುವಕನ ಕಿರುಕುಳದ ವಿಚಾರವನ್ನು ಯುವತಿ ತನ್ನ ಪೋಷಕರಿಗೂ ತಿಳಿಸಿದ್ದಳು. ಆದರೆ, ನಿನ್ನೆ ರಾತ್ರಿ ತನ್ನ ಪಿಜಿ ಸಹಪಾಠಿಗಳು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸೀನಿಯರ್ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಇಂಜಿನಿಯರ್ ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ. ಜೀವನ್ ಗೌಡ ಎಂಬ ವಿದ್ಯಾರ್ಥಿ ವಿರುದ್ಧ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದರು.
ಇದರ ಹಿಂದಿನ ದಿನ ಬಿ ಫಾರ್ಮಾ ವಿದ್ಯಾರ್ಥಿನಿಯನ್ನು ಪರೀಕ್ಷೆ ಬರೆದು ಮನೆಗೆ ಮರಳುತ್ತಿದ್ದಾಗ ಮಲ್ಲೇಶ್ವರದ ರೈಲ್ವೆ ನಿಲ್ದಾಣದ ಬಳಿ ಸೈಕೊ ಕತ್ತು ಕೊಯ್ದು ಕೊಲೆ ಮಾಡಿದ್ದ.



