ನವದೆಹಲಿ: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರ್ನಾಟಕ ಸೇರಿ ದಕ್ಷಿಣ ಭಾರತದ ವಿವಿಧ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 24 ಗಂಟೆಗಳಲ್ಲಿ ಇದು ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ಛತ್ತೀಸ್‌ಗಢ, ಕೊಂಕಣ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಸೌರಾಷ್ಟ್ರ, ಕಚ್, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ವಿವಿಧ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳ, ಕರ್ನಾಟಕ, ದಕ್ಷಿಣ ಕೊಂಕಣ, ಗೋವಾ ಕರಾವಳಿ ಭಾಗ ಮತ್ತು ಪಕ್ಕದ ಸಮುದ್ರ ಪ್ರದೇಶಗಳು, ಲಕ್ಷದ್ವೀಪ, ಕೊಮೊರಿನ್ ಪ್ರದೇಶಗಳು, ಮಾಲ್ಡೀವ್ಸ್, ಆಗ್ನೇಯ ಮತ್ತು ನೈಋತ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಪೂರ್ವ ಮಧ್ಯ ಮತ್ತು ಪಕ್ಕದ ಪಶ್ಚಿಮ ಮಧ್ಯ ಅರೇಬಿಯನ್ ಸಮುದ್ರದ ಹಲವು ಭಾಗಗಳು, ಮನ್ನಾರ್ ಕೊಲ್ಲಿ ಹಾಗೂ ತಮಿಳುನಾಡಿನಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.
ಅಲ್ಲದೇ, ತಮಿಳುನಾಡು ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶ, ಶ್ರೀಲಂಕಾ ಕರಾವಳಿಗಳು, ಆಗ್ನೇಯ ಮತ್ತು ಪಕ್ಕದ ಪೂರ್ವ ಮಧ್ಯ, ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ನೈಋತ್ಯ ಬಂಗಾಳ ಕೊಲ್ಲಿಯ ಮತ್ತು ಅಂಡಮಾನ್ ಸಮುದ್ರದ ಅನೇಕ ಭಾಗಗಳಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ.
ಇದಲ್ಲದೇ, ನೈಋತ್ಯ ಮತ್ತು ಪಕ್ಕದ ಪೂರ್ವ ಮಧ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಪೂರ್ವ ಮಧ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಈಶಾನ್ಯ ಬಂಗಾಳ ಕೊಲ್ಲಿಯ ಭಾಗಗಳಲ್ಲಿಯೂ ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಮತ್ತು ಗಂಟೆಗೆ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ಭಾರಿ ಮಳೆ: ತಮಿಳುನಾಡಿನಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ಭತ್ತದ ಬೆಳೆಗಳು ಮುಳುಗಿವೆ. ವಿಲ್ಲುಪುರಂ ಬಸ್ ನಿಲ್ದಾಣದಲ್ಲಿಯೂ ಸಹ ನೀರು ನಿಂತಿದ್ದರಿಂದ ಪ್ರಯಾಣಿಕರು ಸಿಲುಕಿಕೊಂಡರು. ಧಾರಾಕಾರ ಮಳೆಯಿಂದಾಗಿ ರಾಜ್ಯದ ಅತಿದೊಡ್ಡ ಮೆಟ್ಟೂರು ಅಣೆಕಟ್ಟು ಸೇರಿದಂತೆ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. ಅಣೆಕಟ್ಟುಗಳಿಂದ ಸಮುದ್ರಕ್ಕೆ ನೀರು ಬಿಡುಗಡೆ ಮಾಡಲಾಗಿದೆ. ಸತತ ಮಳೆಯಿಂದ ಮೆಟ್ಟೂರು ಅಣೆಕಟ್ಟು ತನ್ನ ಪೂರ್ಣ ಸಾಮರ್ಥ್ಯವಾದ 120 ಅಡಿಗಳನ್ನು ತಲುಪಿದೆ. ಪ್ರಸ್ತುತ ಅಣೆಕಟ್ಟಿನಿಂದ ಒಟ್ಟು 35,741 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, 10.6 ಮಿ.ಮೀ. ಮಳೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ.
ಕೇರಳದಲ್ಲೂ ಮಳೆ: ಕೇರಳದ ವಿವಿಧ ಭಾಗಗಳಲ್ಲಿಯೂ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಮರ ಮತ್ತು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಲವೆಡೆ ಮನೆಗಳು ಮತ್ತು ವಾಹನಗಳಿಗೆ ಹಾನಿಯನ್ನುಂಟುಮಾಡಿದ್ದು, ಇದರ ಪರಿಣಾಮವಾಗಿ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮತ್ತು ಸಂಚಾರಕ್ಕೆ ಅಡ್ಡಿಯಾಗಿದೆ.
ನಿರಂತರ ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ವಿವಿಧ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮೂರು ಗಂಟೆಗಳ ಕಾಲ ರಾಜ್ಯದ ಎಂಟು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಹಗಲಿನಲ್ಲಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.



