ಖ್ಯಾತ 555 ಬೀಡಿ ಕಂಪನಿಯ ಮಾಲೀಕನಿಗೆ ಗುಂಡಿಕ್ಕಿ ಕೊಂದ ಮಗ ತಾನೂ ಅದೇ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಬೀಡಿ ಉದ್ಯಮದ ಮೂಲಕ ಕೋಟ್ಯಾಧಿಪತಿ ಮಟ್ಟಕ್ಕೆ ಬೆಳೆದಿದ್ದ ಸುರೇಶ್ ಚಂದ್ರ ಅಗರ್ ವಾಲ್ (75) ಅವರನ್ನು ಗುಂಡಿಕ್ಕಿ ಕೊಂದ ನರೇಶ್ ಚಂದ್ರ ಅಗರ್ ವಾಲ್ (52) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಥುರಾದ ವೃಂದಾವನ ಸಮೀಪದ ಕಾಲೊನಿಯಲ್ಲಿ ಮದ್ಯಪಾನ ಮಾಡಬೇಡ ಎಂದು ಬುದ್ದಿವಾದ ಹೇಳಿದ ತಂದೆಯ ಮಾತು ಕೇಳದ ನರೇಶ್ ಮನೆಯಲ್ಲಿಯೇ ಮದ್ಯಪಾನ ಮಾಡಲು ಮುಂದಾದಾಗ ತಂದೆ ಮತ್ತು ಮಗನ ನಡುವೆ ಮಾತಿಗೆ ಮಾತು ಬೆಳೆದು .32 ಪಿಸ್ತೂಲ್ ನಿಂದ ತಂದೆ ಸುರೇಶ್ ಚಂದ್ರ ಅವರ ಎದೆಗೆ ಗುಂಡು ಹಾರಿಸಿದ ನರೇಶ್ ನಂತರ ಅದೇ ಗನ್ ನಿಂದ ಗುಂಡು ಹಾರಿಸಿಕೊಂಡಿದ್ದಾನೆ.
ಕೂಡಲೇ ಕುಟುಂಬದವರು ಓಡಿ ಬಂದು ನೋಡಿದಾಗ ತಂದೆ-ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಇಬ್ಬರೂ ಅಸುನೀಗಿದ್ದಾರೆ.
ಸುರೇಶ್ ಚಂದ್ರ ಕ್ಯಾನ್ಸರ್ ಗೆದ್ದು ಬಂದಿದ್ದರು. ಆದರೆ ದುಶ್ಚಟಕ್ಕೆ ದಾಸನಾಗಿದ್ದ ಮಗನಿಂದಲೇ ಬಲಿಯಾಗಿದ್ದು ದುರ್ದೈವ.
ಹಿಟ್ಟಿನ ಗಿರಣಿಯಿಂದ ಬೀಡಿ ಉದ್ಯಮದವರೆಗೆ
ಸಾಲಿಗ್ರಾಮದಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ ಸುರೇಶ್ ಚಂದ್ರ ನಂತರ 1977ರಲ್ಲಿ ಕಿರಿಯ ಪುತ್ರ ದಿನೇಶ್ ಜೊತೆಗೂಡಿ ಬೀಡಿ ಉದ್ಯಮ ಆರಂಭಿಸಿದರು. ಗ್ಯಾರೇಜ್ ನಲ್ಲಿ ಆರಂಭವಾದ ಸಣ್ಣ ಉದ್ಯಮ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದ್ದು ಕೋಟ್ಯಂತರ ರೂಪಾಯಿ ಸ್ವತ್ತಿನ ಮಾಲೀಕರಾದರು.
ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಿಗೆ ವಿಸ್ತರಣೆ ಆದ ಬೀಡಿ ಉದ್ಯಮವನ್ನು ಮಗ ದಿನೇಶ್ ಕೋಲ್ಕತಾದಲ್ಲಿ ನೋಡಿಕೊಳ್ಳುತ್ತಿದ್ದರೆ, ಇನ್ನಿಬ್ಬರು ಮಕ್ಕಳಾದ ನರೇಶ್ ಮತ್ತು ಮಹೇಶ್ ಬೃಂದಾವನದ ಉದ್ಯಮ ನೋಡಿಕೊಳ್ಳುತ್ತಿದ್ದರು.
ನರೇಶ್ ತನ್ನ ಪತ್ನಿ ಅಂಶು, ಮಗ ಶೌರ್ಯ ಮತ್ತು ಮಗಳು ಶ್ರೇಯಾ ಜೊತೆ ವಾಸಿಸುತ್ತಿದ್ದರು. ಅವರ ಮಗಳು ಮೊರಾದಾಬಾದ್ನಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರೆ, ಅವರ ಮಗ ಬೆಂಗಳೂರಿನಲ್ಲಿ ಬಿ.ಟೆಕ್ ಓದುತ್ತಿದ್ದಾನೆ. ಮಹೇಶ್ ಅವರ ಮಕ್ಕಳಾದ ರಿಯಾ ಮತ್ತು ಕೃಷ್ಣ ವಿದೇಶದಲ್ಲಿ ಓದುತ್ತಿದ್ದಾರೆ.
ಸುರೇಶ್ ಸಜ್ಜನ ವ್ಯಕ್ತಿಯಾಗಿದ್ದರು ಎಂದು ನೆರೆಹೊರೆಯವರು ಬಣ್ಣಿಸಿದ್ದಾರೆ. ಅವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು. ಆದಾಗ್ಯೂ, ನರೇಶ್ ಮುಂಗೋಪದ ಸ್ವಭಾವದವರಾಗಿದ್ದರು ಮತ್ತು ಸಣ್ಣ ವಿಷಯಗಳಿಗೂ ಕೋಪಗೊಳ್ಳುತ್ತಿದ್ದರು. ಅವರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರೂ ಸಹ, ಅವರಿಗೆ ಮದ್ಯಪಾನ ಮಾಡುವ ಅಭ್ಯಾಸವಿತ್ತು ಎಂದು ಹೇಳಿದ್ದಾರೆ.



