Thursday, May 28, 2026
Google search engine
Homeಜಿಲ್ಲಾ ಸುದ್ದಿಜೈ ಹನುಮಾನ್ ಖ್ಯಾತಿಯ ಹಬ್ಬದ ಹೋರಿ ಇನ್ನು ನೆನಪು ಮಾತ್ರ!

ಜೈ ಹನುಮಾನ್ ಖ್ಯಾತಿಯ ಹಬ್ಬದ ಹೋರಿ ಇನ್ನು ನೆನಪು ಮಾತ್ರ!

ಜೈ ಹನುಮಾನ್ ಎಂದೇ ಖ್ಯಾತಿ ಪಡೆದಿದ್ದ ಹಬ್ಬದ ಹೋರಿ ಶನಿವಾರ ಮುಂಜಾನೆ ಅನಾರೋಗ್ಯದ ಕಾರಣ ಮೃತಪಟ್ಟಿದೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗಡಿಭಾಗವಾದ ಶಿಕಾರಿಪುರ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಖ್ಯಾತಿ ಪಡೆದಿದ್ದ ಹಬ್ಬದ ಹೋರಿ ಮೃತಪಟ್ಟಿದ್ದು, ಹೋರಿಗೆ 17ವರ್ಷ ವಯಸ್ಸಾಗಿತ್ತು.

ದಶಕಗಳ ಕಾಲ ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಹುಣಸೇಕಟ್ಟೆ ಜೈ ಹನುಮಾನ್ ಸಾಕಷ್ಟು ಜನಪ್ರಿಯವಾಗಿತ್ತು.

ಅಖಾಡಕ್ಕೆ ಜೈ ಹನುಮಾನ್ ಹೋರಿ ಇಳಿಯುತ್ತಿದ್ದಂತೆ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕೇಕೆ, ಶಿಳ್ಳೆ, ಚಪ್ಪಾಳೆಯೊಂದಿಗೆ ಭರ್ಜರಿಯಾಗಿ ಸ್ವಾಗತಿಸುತ್ತಿದ್ದರು. ಅಖಾಡದಲ್ಲಿ ಮಿಂಚಿನ ಓಟ ಹಾಗೂ ವಿಶಿಷ್ಟ ಪ್ರತಿಕ್ರಿಯೆಗಳ ಮೂಲಕ ಸಾವಿರಾರು ಅಭಿಮಾನಿಗಳನ್ನು ಹೋರಿ ಹೊಂದಿತ್ತು.

ಹೋರಿ ಹಬ್ಬದ ಮೂಲಕವೇ ಹುಣಸೇಕಟ್ಟೆ ಗ್ರಾಮಕ್ಕೆ ಹೆಸರು ತಂದ ಕೀರ್ತಿ ಜೈ ಹನುಮಾನ್ ಹೋರಿಗೆ ಸಲ್ಲುತ್ತದೆ. ಕುದುರೆಗಣಿ ಗ್ರಾಮದಲ್ಲಿ ಬಂಪರ್ ಬಹುಮಾನ ಬೈಕ್ ಸೇರಿದಂತೆ ಒಂದು ತೊಲ ಬಂಗಾರ, ಐದು ಗಾದ್ರೇಜ್, ಡ್ರೆಸಿಂಗ್ ಟೇಬಲ್ ಗಳು, ಟಿವಿಗಳು, ರೆಫ್ರಿಜರೇಟರ್ ಗಳು ಹೀಗೆ ನೂರಾರು ಬಹುಮಾನಗಳನ್ನು ಗೆಲ್ಲುವ ಮೂಲಕ ಹೋರಿ ಹಬ್ಬದಲ್ಲಿ ಇತಿಹಾಸ ಸೃಷ್ಠಿಸಿತ್ತು. ಜೈ ಹನುಮಾನ್ ಹೆಸರಿನ ಹೋರಿ.

ಹುಣಸೇಕಟ್ಟೆ ಗ್ರಾಮದ ತುಕಾರಾಮ್ ಜೈ ಹನುಮಾನ್ ಹೋರಿಯನ್ನು ಸಲುಹಿದ್ದರು. ಮನೆಯಲ್ಲಿಯೇ ಜನಿಸಿದ್ದ ಹೋರಿಯನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಹೋರಿ ಸಾವನ್ನಪ್ಪುತ್ತಿದ್ದಂತೆ ತುಕಾರಾಂ ಮನೆಯ ಸದಸ್ಯರು ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡ ದುಃಖದಲ್ಲಿದ್ದಾರೆ. ಕೊಟ್ಟಿಗೆಯಲ್ಲಿ ಚಿಕ್ಕ ಕರುವಿನಂತೆ ಕುಟುಂಬ ಸದಸ್ಯರೊಂದಿಗೆ ವರ್ತಿಸುತ್ತಿದ್ದ ಹೋರಿ ಅಖಾಡದಲ್ಲಿ ಇಳಿಯುತ್ತಿದ್ದಂತೆ ರೌದ್ರಾವತಾರ ತಾಳುತ್ತಿತ್ತು.

ಹೋರಿ ನಿಧನವಾದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ಅಭಿಮಾನಿಗಳು ಆಗಮಿಸಿ ಅಗಲಿದ ಹೋರಿಯ ಅಂತಿಮ ದರ್ಶನ ಪಡೆದರು. ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು. ಹೋರಿಯ ಮಾಲೀಕರು ಮತ್ತು ಅಭಿಮಾನಿಗಳು ಹೋರಿಯ ಅಂತಿಮಯಾತ್ರೆ ನಡೆಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ಸಂಚರಿಸಿತು. ವಿವಿಧ ವಾಧ್ಯಗಳೊಂದಿಗೆ ಪಟಾಕಿ ಸಿಡಿಸುವ ಮೂಲಕ ಹೋರಿಯ ಅಂತಿಮ ಯಾತ್ರೆ ನಡೆಸಲಾಯಿತು. ಮಹಿಳೆಯರು ಸೇರಿದಂತೆ ಅಭಿಮಾನಿಗಳು ಹೂಮಾಲೆ ಹಾಕಿ ನೈವೇದ್ಯ ಅರ್ಪಿಸಿದರು.

ಗ್ರಾಮದಲ್ಲಿ ಶೋಕಸಾಗರ ಮುಗಿಲು ಮುಟ್ಟಿತ್ತು. ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಜೈ ಹನುಮಾನ್ ಹೋರಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ಜಿಲ್ಲಾಧ್ಯಕ್ಷ ಜೆ.ಎಸ್. ಚಿದಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಹರಗಿ ಸೇರಿದಂತೆ ಸಾವಿರಾರು ಜನ ಹೋರಿಯ ಅಂತಿಮ ದರ್ಶನ ಪಡೆದು, ಹೋರಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments