ಪದೇಪದೇ ಜಗಳ ಮಾಡಿಕೊಂಡು ತವರು ಮನೆಗೆ ಬರುತ್ತಿದ್ದ ಮಗಳ ಮೇಲೆ ಮಚ್ಚಿನಿಂದ ತಾಯಿ ಹಲ್ಲೆ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿರುವ ಹರಿಹರೇಶ್ವರ ದೇವಸ್ಥಾನದ ಬಳಿ ನಿವಾಸಿ ತಾಯಿ ಸರೋಜಮ್ಮ (48) ಮಗಳು ರಮ್ಯಾ (22) ಮೇಲೆ ಮಚ್ಚಿನಿಂದ ಕುತ್ತಿಗೆ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಮ್ಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಮ್ಯ ಎರಡು-ಮೂರು ಬಾರಿ ಗಂಡನ ಜೊತೆ ಜಗಳವಾಡಿಕೊಂಡು ತವರು ಮನೆಗೆ ವಾಪಸ್ ಬಂದಿದ್ದಳು. ಗಂಡನ ಜೊತೆ ಪ್ರತಿದಿನ ಜಗಳ ಮಾಡುತ್ತಿದ್ದ ಮಗಳ ವರ್ತನೆಯಿಂದ ತಾಯಿ ಸರೋಜಮ್ಮ ಬೇಸತ್ತು ಹೋಗಿದ್ದಳು.
ಮಂಗಳವಾರ ಕೂಡ ಇದೇ ರೀತಿ ಗಂಡನ ಜೊತೆ ಜಗಳವಾಡಿ ಮಗಳು ತವರು ಮನೆಗೆ ಬಂದಾಗ ತಾಯಿ ಮತ್ತು ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ತಾಯಿ ಮಚ್ಚಿನಿಂದ ಮಗಳ ಕುತ್ತಿಗೆ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ.
ಗಾಯಾಳು ರಮ್ಯಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಮೇಲೆ ಹಲ್ಲೆ ಮಾಡಿದ ತಾಯಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ಶೋಧ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



