ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಗ್ರಾಮ ಪಂಚಾಯತಿಯ ಕಾಂಗ್ರೆಸ್ ಸದಸ್ಯನನ್ನು ಬಜರಂಗದಳದ ಇಬ್ಬರು ಬರ್ಬರವಾಗಿ ಹತ್ಯೆಗೈದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಡೂರು ತಾಲೂಕಿನ ಸಖರಾಪಟ್ಟಣದ ಕಲ್ಮುರುಡೇಶ್ಚರ ಮಠದ ಬಳಿ ನಡೆದಿದ್ದು ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ.
ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಣೇಶ್ ಗೌಡ (38) ಕೊಲೆಯಾಗಿದ್ದು, ಬಜರಂಗದಳ ಕಾರ್ಯಕರ್ತರು ಎನ್ನಲಾದ ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಗಲಾಟೆಯಲ್ಲಿ ಆರೋಪಿ ಸಂಜಯ್ ತಲೆಗೂ ಗಂಭೀರ ಗಾಯವಾಗಿದ್ದು, ಆತನನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಸಂಜಯ್ ಮತ್ತು ಮಿಥುನ್ ಸೇರಿದಂತೆ 5 ಮಂದಿಯನ್ನು ಸಖರಾಯಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಬಳಿಕ ಸಖರಾಯಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಗಲಾಟೆಯಲ್ಲಿ ಶಾಮೀಲಾದ ಇಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ನಂತರ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಆನಂದ್, ‘ಬ್ಯಾನರ್ ತೆರವು ವಿಚಾರವಾಗಿ ಗಲಾಟೆ ನಡೆದಿದೆ.
ನಂತರ ಗಣೇಶ್ ಅವರನ್ನು ಕರೆಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ 8 ಜನರು ಶಾಮೀಲಾಗಿರುವ ಶಂಕೆ ಇದೆ. ಕೆಲವು ದಿನಗಳಿಂದಲೇ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಇತ್ತು. ಪೊಲೀಸರು ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಕಲ್ಮರಡಿ ಮಠದ ಕಿರಿದಾದ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ನಲ್ಲಿ ಅಡ್ಡಗಟ್ಟಿದ ಹಂತಕರ ತಂಡ ಅವರ ಮೇಲೆ ಮಚ್ಚಿನಿಂದ ದಾಳಿ ಮಾಡಿದೆ. ನಂತರ ಮಚ್ಚನ್ನು ಅಲ್ಲೇ ಬಿಸಾಡಿ ಹಂತಕರು ತೆರಳಿದ್ದಾರೆ. ಸದ್ಯ ಆ ಮಚ್ಚು ರಸ್ತೆಯಲ್ಲೇ ಬಿದ್ದಿದೆ.
ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀರು ಈವರೆಗೆ ಐವರನ್ನು ವಶಕ್ಕೆ ಪಡೆದಿದ್ದಾರೆ. ಸಂಜಯ್, ಭೂಷಣ್, ಮಿಥುನ್ ಸೇರಿದಂತೆ 5 ಜನರನ್ನು ವಶಕ್ಕೆ ಪಡೆಯಲಾಗಿದೆ.



