ಹೊಸ ವರ್ಷಾಚರಣೆ ದಿನವಾದ ಡಿಸೆಂಬರ್ 31ರಂದು ಮಧ್ಯರಾತ್ರಿ 3 ಗಂಟೆಯವರೆಗೆ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ.
ಬಿಎಂಆರ್ ಸಿಎಲ್ ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ಮಧ್ಯರಾತ್ರಿ 12.30ರವರೆಗೆ ಹೊಸ ವರ್ಷಾಚರಣೆ ಸಂಭ್ರಮವನ್ನು ಆಚರಿಸಿದ ನಂತರ ಪ್ರಯಾಣಿಕರು ಸುರಕ್ಷಿತವಾಗಿ ಮನೆ ತಲುಪಲು ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ ಎಂದಿದೆ.
ಮಧ್ಯರಾತ್ರಿ 2.45ಕ್ಕೆ ಮೆಜೆಸ್ಟಿಕ್ ನಲ್ಲಿ ಕೊನೆ ರೈಲು ಹೊರಡಲಿದೆ. ರಾತ್ರಿ 11ಕ್ಕೆ ಟಿಕೆಟ್ ಕೌಂಟರ್ ಗಳು ಮುಚ್ಚಲಾಗುವುದು. ನಂತರ ಯಾವುದೇ ಪ್ರಯಾಣಿಕರಿಗೆ ಟಿಕೆಟ್ ದೊರೆಯುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಹೊಸ ವರ್ಷಾಚರಣೆ ಸಂಭ್ರಮ ಆಚರಿಸಲು ಎಂಜಿ ರಸ್ತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಟ್ರಿನಿಟಿ, ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 11 ಗಂಟೆ ನಂತರ ಟಿಕೆಟ್ ಕೌಂಟರ್ ಮುಚ್ಚಲಾಗುವುದು. ಕ್ಯೂ ಅಂಡ್ ಕೋರ್ ಬಳಸಿ ಟಿಕೆಟ್ ಪಡೆಯಬಹುದು ಎಂದು ಸಂಸ್ಥೆ ವಿವರಿಸಿದೆ.
ಹಸಿರು ನೇರಳೆ ಮಾರ್ಗದಲ್ಲಿ ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ಹಳದಿ ಮಾರ್ಗದಲ್ಲಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಹಳದಿ ಮಾರ್ಗದಲ್ಲಿ ಮಧ್ಯರಾತ್ರಿ 3 ಗಂಟೆವರೆಗೂ ರೈಲು ಸಂಚರಿಸಲಿದೆ ಎಂದು ಸಂಸ್ಥೆ ವಿವರಣೆ ನೀಡಿದೆ.



