Thursday, July 9, 2026
Google search engine
Homeಅಪರಾಧಮಗನ ಕೊಂದು 'ಹೃದಯಾಘಾತ'ದ ಕಥೆಕಟ್ಟಿದ ತಂದೆ: ಸ್ನೇಹಿತರ ಸಮಯಪ್ರಜ್ಞೆಯಿಂದ ಬಯಲಾದ ರಹಸ್ಯ

ಮಗನ ಕೊಂದು ‘ಹೃದಯಾಘಾತ’ದ ಕಥೆಕಟ್ಟಿದ ತಂದೆ: ಸ್ನೇಹಿತರ ಸಮಯಪ್ರಜ್ಞೆಯಿಂದ ಬಯಲಾದ ರಹಸ್ಯ

ಬೆಳಗಾವಿ: ಹೆತ್ತ ಮಗನನ್ನೇ ತಂದೆಯೊಬ್ಬ ಹತ್ಯೆ ಮಾಡಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆಂದು ಬಿಂಬಿಸಿ ಅಂತ್ಯಸಂಸ್ಕಾರಕ್ಕೆ ಮುಂದಾದ ಭೀಕರ ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಮೃತನ ಸ್ನೇಹಿತರು ತೋರಿದ ಸಮಯಪ್ರಜ್ಞೆ ಮತ್ತು ಅನುಮಾನದಿಂದಾಗಿ ಈ ಕೊಲೆ ರಹಸ್ಯ ಕೇವಲ ಕೆಲವೇ ಗಂಟೆಗಳಲ್ಲಿ ಬಯಲಾಗಿದ್ದು, ಪೊಲೀಸರು ಆರೋಪಿ ತಂದೆ ಹಾಗೂ ಆತನ ಸಹಚರನನ್ನು ಬಂಧಿಸಿದ್ದಾರೆ.

ಘಟನೆಯ ವಿವರ

ಪಟ್ಟಣದ ಇಂದಿರಾನಗರದ ನಿವಾಸಿ ಕಿರಣ ನಿಜಗುಣಿ ಆಲೂರೆ (31) ಕೊಲೆಯಾದ ದುರ್ದೈವಿ. ಈತನ ತಂದೆ ನಿಜಗುಣಿ ಆಲೂರೆ ಮಗನನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಈ ಕೃತ್ಯಕ್ಕೆ ನಿಜಗುಣಿ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕ ಉಸ್ಮಾನ್ ಮುಲ್ಲಾ ಎಂಬಾತ ಸಾಥ್ ನೀಡಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?

ಕಳೆದ ಸೋಮವಾರ ಮಧ್ಯಾಹ್ನ ಕಿರಣನನ್ನು ಮನೆಯಲ್ಲಿ ವೈರ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಘಟನೆಯ ನಂತರ ಗಾಬರಿಗೊಂಡ ನಿಜಗುಣಿ, ಮಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಎಲ್ಲೆಡೆ ನಂಬಿಸಿದ್ದಾನೆ. ತನ್ನ ತಪ್ಪನ್ನು ಮರೆಮಾಚಲು ಅಂದೇ ರಾತ್ರಿ 11 ಗಂಟೆಯ ಸುಮಾರಿಗೆ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಿದ್ದನು. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಂತೆ ಹೂಳುವ ಪದ್ಧತಿ ಇದ್ದರೂ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸುಡಲು ತಂದೆ ಮುಂದಾಗಿದ್ದನು.

ಸ್ನೇಹಿತರ ಅನುಮಾನವೇ ವರವಾಯಿತು

ಮರಣೋತ್ತರ ಪರೀಕ್ಷೆ ಅಥವಾ ವೈದ್ಯಕೀಯ ತಪಾಸಣೆ ನಡೆಸದೆ ಅಂತ್ಯಸಂಸ್ಕಾರಕ್ಕೆ ಆತುರ ತೋರುತ್ತಿದ್ದ ನಿಜಗುಣಿಯ ನಡವಳಿಕೆ ಕಿರಣನ ಸ್ನೇಹಿತರಾದ ಉದಯ ವಾಗಮರೆ ಮತ್ತು ಜೀವನ ಮಾಂಜರೆಕರ್ ಅವರಲ್ಲಿ ಅನುಮಾನ ಮೂಡಿಸಿತು. ಕೂಡಲೇ ಮೃತದೇಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುತ್ತಿಗೆಯ ಸುತ್ತ ಗಾಯದ ಗುರುತು ಹಾಗೂ ಕಿವಿಯಲ್ಲಿ ರಕ್ತ ಬಂದಿರುವುದು ಕಂಡುಬಂದಿದೆ.

ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸ್ನೇಹಿತರು, ಹೋಟೆಲ್ ಮಾಲೀಕ ಉಸ್ಮಾನ್‌ನನ್ನು ತೀವ್ರವಾಗಿ ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಕೂಡಲೇ ಸ್ಮಶಾನಕ್ಕೆ ತಂದೆ ನಿಜಗುಣಿಯನ್ನು ಕರೆಸಿ ಪ್ರಶ್ನಿಸಿದಾಗ, ಆತ ಮಗನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕೊಲೆಗೆ ಕಾರಣವೇನು?

ಮೃತ ಕಿರಣ ಕಳೆದ ಕೆಲವು ದಿನಗಳಿಂದ ಮದ್ಯ ಹಾಗೂ ಗಾಂಜಾ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ಹಣಕ್ಕಾಗಿ ಪ್ರತಿದಿನ ತಂದೆಯೊಂದಿಗೆ ಗಲಾಟೆ ಮಾಡುತ್ತಿದ್ದನು. ಮಗನ ಈ ದುಶ್ಚಟ ಹಾಗೂ ಮನೆಯಲ್ಲಿನ ಪ್ರತಿದಿನದ ಕಿರುಕುಳದಿಂದ ಬೇಸತ್ತ ತಂದೆ, ಹೋಟೆಲ್ ಮಾಲೀಕನ ಸಹಾಯದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕಿರಣನ ಸ್ನೇಹಿತರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಚಿಕ್ಕೋಡಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments