ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಕೆಎಲ್ ರಾಹುಲ್ ಸಿಡಿಸಿದ ಜವಾಬ್ದಾರಿಯುತ ಶತಕದ ನೆರವಿನಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ 285 ರನ್ ಸವಾಲೊಡ್ಡಿದೆ.
ರಾಜ್ ಕೋಟ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 284 ರನ್ ಸಂಪಾದಿಸಿತು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ಕೆಎಲ್ ರಾಹುಲ್ 92 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 112 ರನ್ ಬಾರಿಸಿ ಔಟಾಗದೇ ಉಳಿದರು. ಇದು ರಾಹುಲ್ ಅವರ 8ನೇ ಶತಕವಾಗಿದೆ.
ಭಾರತ ತಂಡ ರೋಹಿತ್ ಶರ್ಮ ಮತ್ತು ನಾಯಕ ಶುಭಮನ್ ಗಿಲ್ 70 ರನ್ ಪೇರಿಸಿ ಉತ್ತಮ ಆರಂಭ ನೀಡಿದರೂ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಒತ್ತಡಕ್ಕೆ ಸಿಲುಕಿತು.
ಗಿಲ್ 53 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 56 ರನ್ ಬಾರಿಸಿದರೆ, ರೋಹಿತ್ ಶರ್ಮ 38 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 24 ರನ್ ಗಳಿಸಿ ನಿರ್ಗಮಿಸಿದರು. ಮೊದಲ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ವಿರಾಟ್ ಕೊಹ್ಲಿ (23) ಬೇಗನೇ ಔಟಾದರು. ಶ್ರೇಯಸ್ ಅಯ್ಯರ್ (8) ಹೆಚ್ಚು ಹೊತ್ತು ನಿಲ್ಲಲಿಲ್ಲ.
ಭಾರತ 191 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ (27) 6ನೇ ವಿಕೆಟ್ ಗೆ 56 ರನ್ ಜೊತೆಯಾಟದಿಂದ ತಂಡವನ್ನು ಮತ್ತೆ ಹಳಿಗೆ ತಂದರು. ಜಡೇಜಾ ನಿರ್ಗಮಿಸಿದ ನಂತರ ನಿತಿಶ್ ಕುಮಾರ್ ರೆಡ್ಡಿ (20) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ನ್ಯೂಜಿಲೆಂಡ್ ಪರ ಕ್ರಿಸ್ಟಿನ್ ಕ್ಲಾರ್ಕ್ 56 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಉಳಿದ ಬೌಲರ್ ಗಳು ತಲಾ 1 ವಿಕೆಟ್ ಪಡೆದರು.



