ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಪಟ್ಟಣಗೆರೆ ಶೆಡ್‌ನ ಕೆಲಸಗಾರ ಮಲ್ಲಿಕಾರ್ಜುನ ನ್ಯಾಯಾಲಯದಲ್ಲಿ ಉಲ್ಟಾ ಸಾಕ್ಷಿ ನುಡಿದಿದ್ದಾರೆ.
ಈ ಬೆಳವಣಿಗೆ ನಟ ದರ್ಶನ್ ಸೇರಿದಂತೆ ಪ್ರಕರಣದ ಆರೋಪಿಗಳಿಗೆ ಕಾನೂನು ಹೋರಾಟದಲ್ಲಿ ಕೊಂಚ ನಿರಾಳತೆ ತಂದಿದೆ.
ಬೆಂಗಳೂರಿನ 59ನೇ ಸಿಸಿಹೆಚ್ (ಸೆಷನ್ಸ್) ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಮಂಗಳವಾರ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ ಅವರ ಸಾಕ್ಷ್ಯ ದಾಖಲಿಸಿಕೊಳ್ಳಲಾಯಿತು. ತನಿಖೆಯ ವೇಳೆ ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ಘಟನೆಯ ಕುರಿತು ಹೇಳಿಕೆ ನೀಡಿದ್ದ ಅವರು, ನ್ಯಾಯಾಲಯದಲ್ಲಿ ಮಾತ್ರ ತಮ್ಮ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷ್ಯ ನೀಡಿದ್ದಾರೆ.
ಕಣ್ಣಾರೆ ನೋಡಿಲ್ಲ:
ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಯನ್ನು ಕಣ್ಣಾರೆ ನೋಡಿಲ್ಲ ಎಂದು ಮಲ್ಲಿಕಾರ್ಜುನ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ತನಿಖೆಯ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಸಾಕ್ಷಿದಾರರು ಹಿಂದಿನ ಹೇಳಿಕೆಗೆ ವ್ಯತಿರಿಕ್ತವಾಗಿ ಸಾಕ್ಷ್ಯ ನುಡಿದ ಹಿನ್ನೆಲೆಯಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ), ಮಲ್ಲಿಕಾರ್ಜುನ ಅವರನ್ನು ಭಾಗಶಃ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.ಇನ್ನು ಮಲ್ಲಿಕಾರ್ಜುನ ಅವರ ಪಾಟೀಸವಾಲನ್ನು ನವೆಂಬರ್ 30ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.
ಸಾಕ್ಷಿಗಳ ಸರಣಿ ಯು-ಟರ್ನ್:
ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿದಾರರು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಂದ ಹಿಂದೆ ಸರಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪಟ್ಟಣಗೆರೆ ಶೆಡ್‌ನ ಸೆಕ್ಯುರಿಟಿ ಗಾರ್ಡ್ ನರೇಂದ್ರ ಸಿಂಗ್ ಕೂಡ ವಿಚಾರಣೆ ವೇಳೆ ಉಲ್ಟಾ ಸಾಕ್ಷಿ ನುಡಿದಿದ್ದರು.
ತನಿಖೆಯ ಸಂದರ್ಭದಲ್ಲಿ ಆರೋಪಿಗಳನ್ನು ನೋಡಿರುವುದಾಗಿ ಹೇಳಿದ್ದ ನರೇಂದ್ರ ಸಿಂಗ್, ನ್ಯಾಯಾಲಯದ ವಿಚಾರಣೆ ವೇಳೆ ತಮ್ಮ ನಿಲುವು ಬದಲಿಸಿದ್ದರು. ಮತ್ತೊಬ್ಬ ಪ್ರಮುಖ ಸಾಕ್ಷಿ ಕಿರಣ್ ಕೂಡ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷ್ಯ ನೀಡಿದ್ದರು.
ಈ ಮೂವರು ಸಾಕ್ಷಿದಾರರ ಪಾಟೀಸವಾಲು ನವೆಂಬರ್ 30ರಂದು ನಡೆಯುವ ಸಾಧ್ಯತೆಯಿದೆ. ಅಂದು ವಿಶೇಷ ಸಾರ್ವಜನಿಕ ಅಭಿಯೋಜಕರು ಸಾಕ್ಷಿದಾರರನ್ನು ಪ್ರಶ್ನಿಸಲಿದ್ದಾರೆ.
ಪ್ರತಿಕೂಲ ಸಾಕ್ಷಿ:
ತನಿಖೆಯ ಸಂದರ್ಭದಲ್ಲಿ ನೀಡಿದ ಹೇಳಿಕೆಗೂ ನ್ಯಾಯಾಲಯದಲ್ಲಿ ನೀಡುವ ಸಾಕ್ಷ್ಯಕ್ಕೂ ವ್ಯತ್ಯಾಸವಿದ್ದರೆ, ಅಂತಹ ಸಾಕ್ಷಿದಾರರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಪ್ರಾಸಿಕ್ಯೂಷನ್ ನ್ಯಾಯಾಲಯದ ಅನುಮತಿ ಕೋರಬಹುದು.
ನ್ಯಾಯಾಲಯ ಅನುಮತಿ ನೀಡಿದ ಬಳಿಕ ಸರ್ಕಾರಿ ಅಭಿಯೋಜಕರು ತಮ್ಮದೇ ಸಾಕ್ಷಿದಾರರನ್ನು ಪಾಟೀಸವಾಲಿಗೆ ಒಳಪಡಿಸಿ, ಹಿಂದಿನ ಹೇಳಿಕೆ ಮತ್ತು ಈಗಿನ ಸಾಕ್ಷ್ಯದ ನಡುವಿನ ವ್ಯತ್ಯಾಸದ ಬಗ್ಗೆ ಪ್ರಶ್ನಿಸಬಹುದು.
ಪ್ರಕರಣದ ಪ್ರಮುಖ ಸಾಕ್ಷಿದಾರರು ಒಬ್ಬೊಬ್ಬರಾಗಿ ತಮ್ಮ ಹಿಂದಿನ ಹೇಳಿಕೆಗಳಿಂದ ಹಿಂದೆ ಸರಿಯುತ್ತಿರುವುದು ಪ್ರಾಸಿಕ್ಯೂಷನ್‌ಗೆ ಸವಾಲಾಗಿ ಪರಿಣಮಿಸಿದೆ. ನವೆಂಬರ್ 30ರಂದು ನಡೆಯಲಿರುವ ವಿಚಾರಣೆ ಇದೀಗ ಕುತೂಹಲ ಮೂಡಿಸಿದೆ.
