Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ರಾಜ್ಯ

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆಯಿಂದ ನೀರು ಬರಲ್ಲ; ಹೆಚ್.ಡಿ. ಕುಮಾರಸ್ವಾಮಿ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
5 ನಿಮಿಷ ಓದು 25 ವೀಕ್ಷಣೆಗಳು
hd kumarswamy
hd kumarswamy

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಕೋಲಾರದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ ಬೆಂಗಳೂರಿನ ರೊಚ್ಚು ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಎಂದರು.

ಈ ಜಿಲ್ಲೆಗೆ ಕೃಷ್ಣಾ ನೀರು ತರುವ ಬಗ್ಗೆ ಸಂಸದರಾದ ಮಲ್ಲೇಶ್ ಬಾಬು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ. ಕೃಷ್ಣ ನದಿ‌ ನೀರನ್ನು ಹರಿಸುವ ಕುರಿತು ಮಲ್ಲೇಶ್ ಬಾಬು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಸಾಧಿಸಬೇಕಿದೆ. ಅದಕ್ಕಾಗಿ ಅವರನ್ನು‌ ಭೇಟಿ ಮಾಡುತ್ತೇನೆ. ಅವರ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಅವರ ಸಹಕಾರ ತೆಗೆದುಕೊಳ್ಳುವ ಕೆಲಸ‌ ಮಾಡುತ್ತೇವೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿದ ರುಣ ನಮ್ಮ‌ಮೇಲಿದೆ. ಅದನ್ನು ತೀರಿಸುವ ಕೆಲಸ ಮಾಡುವ ಪ್ರಯತ್ನ ಮಾಡುತ್ತೇವ ಎಂದು ಕೇಂದ್ರ ಸಚಿವರು ಹೇಳಿದರು.

2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಆಡಿದ ದಿನವೇ ನಾನು ಕೋಲಾರದಲ್ಲಿದ್ದೆ. ಅವತ್ತೇ ಹೇಳಿದ್ದೆ. ಇಲ್ಲಿ ನೀರು ಸಿಗುವುದಿಲ್ಲ, ಸರಕಾರ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದೆ. ಆದರೂ ಐದೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದರು. ನಾನು ನಮ್ಮ ಕಡೆಯ ಹಳ್ಳಿ ಭಾಷೆಯಲ್ಲಿ ಅವತ್ತೇ ಹೇಳಿದ್ದೆ. ಎತ್ತಿನಹೊಳೆಯಿಂದ ಎರಡು ವರ್ಷಗಳಲ್ಲಿ‌ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದು‌ ಹೇಳಿದ್ದೆ. ನನ್ನ ತಲೆಯಲ್ಲಿ ಕೂದಲು ಹೋಯಿತೇ ಹೊರತು ಈ ಜಿಲ್ಲೆಗಳಿಗೆ ನೀರು ಹರಿಯಲಿಲ್ಲ ಎಂದು ಅವರು ಲೇವಡಿ ಮಾಡಿದರು.

ಅವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದಾಗಿ ಹೇಳಿ‌ ಹತ್ತು ವರ್ಷ ಆಗಿದೆ. ಆ ಯೋಜನೆಯ ಹೆಸರಿನಲ್ಲಿ ಎಷ್ಟೆಲ್ಲಾ ಲೂಟಿ ಆಗಿದೆ ಎನ್ನುವುದು ಗೊತ್ತಿದೆ. ಸಿಎಜಿ ವರದಿಯಲ್ಲಿ ಇದೆಲ್ಲವೂ ಇದೆ. ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟಿದ್ದಾರೆ, ಕಳಪೆ ಕಾಮಗಾರಿ ಆಗಿ ಹಣ ದುರುಪಯೋಗ ಆಗಿದೆ ಎಂದು ವರದಿಯಲ್ಲಿ ಉಲ್ಲೇಖವಿದೆ. ಈಗ ₹30,000 ಕೋಟಿಗೆ ಎತ್ತಿನಹೊಳೆ ಯೋಜನಾ ವೆಚ್ಚ ತಲುಪಿದೆ. ಇದೆಲ್ಲಾ ನಮ್ಮ ಶ್ರೀನಿವಾಸಪುರದ ಬುದ್ದಿವಂತ ಮಾಜಿ ಶಾಸಕರಿಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಬೆಂಗಳೂರಿನ ರೊಚ್ಚು ನೀರಿನಿಂದಾಗಿ ಸಣ್ಣ ಮಕ್ಕಳು ಕೂಡ ಕಾಯಿಲೆಗೆ ತುತ್ತಾಗುತ್ತಿವೆ. ನದಿಯ ನೀರು ಕೊಡುತ್ತೇವೆ ಎಂದವರು ರೊಚ್ಚು ನೀರು ಕೊಟ್ಟು ಮೋಸ ಮಾಡಿದರು. ಈ ಜಿಲ್ಲೆಗಳ ಜನ ಕಾಂಗ್ರೆಸ್ಸಿಗರಿಗೆ ಏನು ದ್ರೋಹ ಮಾಡಿದ್ದರು? ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವರದಿ ನೀಡಿವೆ. ಅವುಗಳನ್ನು ನೋಡಿದರೆ ಈ ಜಿಲ್ಲೆಗಳಿಗೆ ಆಗಿರುವ ಹಾನಿ ಏನೆಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ದೇಶ ವಿದೇಶಗಳಲ್ಲಿ ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದರು. ಇವತ್ತು ಈ ಭಾಗದ ತರಕಾರಿಯನ್ನು ಕೇಳುವವರೇ ಇಲ್ಲ. ಈಗ ನೋಡಿದರೆ 2027ಕ್ಕೆ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ! ಎತ್ತಿನಹೊಳೆಯ ಯಂತ್ರೋಪಕರಣಗಳು ಈಗಾಗಲೇ ತುಕ್ಕು ಹಿಡಿಯುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕೆಯಲ್ಲಿ ಬಂದ ಒಂದು ವರದಿಯನ್ನು ಗಮನಿಸಿ ಬಂಗಾರಪೇಟೆಯ ಯರಗೋಳ್ ಯೋಜನೆ ಅನುಷ್ಠಾನಕ್ಕೆ ನಾನು ತೀರ್ಮಾನ ಮಾಡಿದ್ದೆ. ಆದರೆ, ದುರಂತವೆಂದರೆ ಯರಗೋಳ್ ಜಲಾಶಯಕ್ಕೆ ಕೂಡ ಕೆಸಿ ವ್ಯಾಲಿಯ ರೊಚ್ಚು ನೀರು ಹರಿಸುತ್ತಿದ್ದಾರೆ. ಎತ್ತಿನಹೊಳೆ ದುಡ್ಡು ಹೊಡೆಯುವ ಕಾರ್ಯಕ್ರಮ, ಇದನ್ನು ಶಂಕುಸ್ಥಾಪನೆ ದಿನವೇ ಹೇಳಿದ್ದೆ. ಅದು ಇವತ್ತು ಸತ್ಯವಾಗಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರಕ್ಕೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಇನ್ನು ಎಷ್ಟು ದಿನ ಬೇಕು? ಎಷ್ಟು ದಿನ ಹೀಗೆಯೇ ಸುಳ್ಳು ಹೇಳಿಕೊಂಡು ತಿರುಗುತ್ತೀರಿ? ನಾಡಿನ ಜನರು 140 ಶಾಸಕರನ್ನು‌ ಗೆಲ್ಲಿಸಿ ಕೊಟ್ಟು ಕೆಲಸ ಮಾಡಿ ಎಂದು ಹೇಳಿದರೆ, ಇವರು ಮಾತ್ರ ಕುರ್ಚಿ ಕಿತ್ತಾಟ ನಡೆಸುತ್ತಿದ್ದಾರೆ. ಮಾತೆತ್ತಿದರೆ ಕೇಂದ್ರ ಸರ್ಕಾರದ ಬೆರಳು ಮಾಡುತ್ತಾರೆ. ರಾಜ್ಯದ ಕೆಲಸಗಳಿಗೆ ಸಂಬಂಧಿಸಿ ಈವರೆಗೂ ಸಿಎಂ, ಡಿಸಿಎಂ ಸೇರಿ ಯಾವೊಬ್ಬ ಸಚಿವರು ನಮ್ಮನ್ನು ಭೇಟಿ ಮಾಡಿಲ್ಲ. ಆದರೂ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ನಮ್ಮ ಪ್ರಯತ್ನದಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂದ್ರ ಸರ್ಕಾರ ಮಾವಿಗೆ ಬೆಂಬಲ‌ ಬೆಲೆ‌ ನೀಡಿದೆ. ತಂಬಾಕು ಬೆಳೆಗಾರರ ಹಿತರಕ್ಷಣೆ ಮಾಡಿದ್ದೇವೆ. ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ್ದೇವೆ ಎಂದು ಅವರು ಹೇಳಿದರು.

ರಮೇಶ್ ಕುಮಾರ್ ಗೆ ನೋಟಿಸ್; ನನಗೆ ಸಂಬಂಧವಿಲ್ಲ ಎಂದ ಹೆಚ್ಡಿಕೆ:

ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೋಟಿಸ್ ನೀಡಿರುವುದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಬಿಡದಿಯಲ್ಲಿ ಈ ಸರ್ಕಾರ ನನಗೂ ನೋಟಿಸ್ ಕೊಟ್ಟು ಕೊಡಬಾರದ ಕಾಟ ನೀಡುತ್ತಿದೆ. ಅದಕ್ಕೆ ರಮೇಶ್ ಕುಮಾರ್ ಅವರು ಕಾರಣ ಎಂದು ಹೇಳಿದರೆ ಆಗುತ್ತದೆಯೇ? ನನ್ನ ವಿಚಾರಕ್ಕೆ ಎಸ್ ಐಟಿ ರಚನೆ ಮಾಡಿದ್ದಾರೆ. ಅವರ ವಿಚಾರಕ್ಕೆ ಯಾಕೆ ರಚನೆ ಮಾಡಿಲ್ಲ ಏಕೆ? ಕೋರ್ಟುಗಳು ಇವೆ, ಹೋರಾಟ ಮಾಡಲಿ, ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಅವರ ವೈಯುಕ್ತಿಕವಾಗಿ ಇರುವ ಸಮಸ್ಯೆಯಿಂದಾಗಿ ಕೃಷಿ‌ ಕುರಿತು ಏನೇನೋ‌ ಹೇಳುತ್ತಿದ್ದಾರೆ. ಕಾನೂನುನ್ನು ಜಯಿಸುವಷ್ಟು ಬುದ್ಧಿವಂತ ಅವರು. ನಿಮಗೆ ಸಮಸ್ಯೆ ಬಂದಿದ್ದಾಗ ಅದು ಅರ್ಥ ಆಗಿದೆ ಎಂದು ಟಾಂಗ್ ಕೊಟ್ಟರು.

ಸೀಟು ಹಂಚಿಕೆ ಮಾತುಕತೆ ನಡೆದಿಲ್ಲ:

ಮಂಡ್ಯ ಅಥವ ರಾಜ್ಯದ ಯಾವುದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸೀಟು ಕುರಿತು ಮಾತುಕತೆ ಆಗಿಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಬಿಜೆಪಿಯೊಂದಿಗೆ ಪರಸ್ಪರ ಮಾತಿನ ಮೂಲಕ ಎಲ್ಲವನ್ನು ತೀರ್ಮಾನ ಕೈಗೊಳ್ಳುತ್ತೇವೆ. ನಮ್ಮ ಮೊದಲ ಆದ್ಯತೆ ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಗಮನ ನೀಡಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು.

ಸಂಸದರಾದ ಮಲ್ಲೇಶ್ ಬಾಬು, ಶಾಸಕರಾದ ಜಿ.ಕೆ. ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಇಂಚರ ಗೋವಿಂದರಾಜು, ಮೇಲೂರು ರವಿ, ಮಾಜಿ ಶಾಸಕರಾದ ಚೌಡರೆಡ್ಡಿ ತೂಪಲ್ಲಿ, ಹೆಚ್.ಎಂ. ರಮೇಶ್ ಗೌಡ, ಡಾ. ಕೆ.ಅನ್ನದಾನಿ ಮುಂತಾದವರು ಹಾಜರಿದ್ದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment