ರಾಯಚೂರು: ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಯುವಕರು ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಹೊಸೂರು ಸಿದ್ಧಾಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ದೇವತೆ ಯಲ್ಲಮ್ಮ ದೇವಿ ಜಾತ್ರೆಯ ನಿಮಿತ್ತ ದೇವಿ ಉತ್ಸವ ಮೆರವಣಿಗೆ ಸಮಯದಲ್ಲಿ ಯುವಕರು ಮಾರಕಾಸ್ತ್ರ ಹಾಗೂ ಬಂದೂಕು ಪ್ರರ್ದಶನ ಮಾಡಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಮೂಲಕ ಪುಂಡಾಟಿಕೆ ಮೆರದಿದ್ದರೆ ಎಂದು ಹೇಳಲಾಗುತ್ತಿದೆ.
ಊರು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶ ಹೊಂದಿರುವ ಕಾರಣಕ್ಕೆ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಬಂದೂಕುಗಳನ್ನ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಜಾಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಗ್ರಾಮದಲ್ಲಿ 2026 ಜ.27ರಂದು ಯಲ್ಲಮ್ಮ ಜಾತ್ರೆಯ ಮೆರವಣಿಗೆ ಸಮಯದಲ್ಲಿ ಈ ಘಟನೆ ನಡೆದಿದೆ. ಅಂದು ನಡೆದಿರುವ ಘಟನೆ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ, ಪ್ರಕರಣ ದಾಖಲಿಸುವಂತೆ ಸಂಬಂಧಿಸಿದ ಪೊಲೀಸ್ ಠಾಣೆ ಸೂಚನೆ ನೀಡಲಾಗಿದೆ ಜೊತೆಗೆ ಬಂದೂಕು ವಶ ಪಡೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ರಾಯಚೂರು ತಿಳಿಸಿದ್ದಾರೆ.



