Thursday, May 14, 2026
Google search engine
Homeಕ್ರೀಡೆರಣಜಿ ಟ್ರೋಫಿ ಫೈನಲ್: `ಶುಭಂ' ಶತಕಕ್ಕೆ ಕರ್ನಾಟಕ ಬೌಲರ್ ಗಳು ಚಿತ್

ರಣಜಿ ಟ್ರೋಫಿ ಫೈನಲ್: `ಶುಭಂ’ ಶತಕಕ್ಕೆ ಕರ್ನಾಟಕ ಬೌಲರ್ ಗಳು ಚಿತ್

ಕರ್ನಾಟಕದ ಬೌಲರ್ ಗಳ ಬೆವರಿಳಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶುಭಂ ಪುಂದಿರ್ ಗಳಿಸಿದ ಶತಕದ ನೆರವಿನಿಂದ ಜಮ್ಮು ಕಾಶ್ಮೀರ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದ ಗೌರವ ಗಿಟ್ಟಿಸಿದೆ.

ಹುಬ್ಬಳ್ಳಿ ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಜಮ್ಮು ಕಾಶ್ಮೀರ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 284 ರನ್ ಕಲೆ ಹಾಕಿದೆ.

ಕರ್ನಾಟಕದ ಅನುಭವಿ ಬೌಲರ್ ಪ್ರಸಿದ್ಧ ಕೃಷ್ಣ ಕಮ್ರಾನ್ ಇಕ್ಬಾಲ್ (6) ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರು. ಆದರೆ ನಂತರ ಜೊತೆಯಾದ ಯಾವೆರ್ ಹುಸೇನ್ ಮತ್ತು ಶುಭಂ ಪುಂದಿರ್ ಎರಡನೇ ವಿಕೆಟ್ ಗೆ 169 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿದರು.

ಯಾವೆರ್ 150 ಎಸೆತಗಳಲ್ಲಿ 13 ಬೌಂಡರಿ ನೆರವಿನೊಂದಿಗೆ 88 ರನ್ ಪೇರಿಸಿ ಪ್ರಸಿದ್ಧ ಕೃಷ್ಣಗೆ ಎರಡನೇ ಬಲಿಯಾಗಿ ಪೆವಿಲಿಯನ್ ಸೇರಿಕೊಂಡರು.

ಮತ್ತೊಂದು ತುದಿಯಲ್ಲಿ ಬಂಡೆಯಂತೆ ನಿಂತು ಆಡಿದ ಶುಭಂ ಶತಕದ ಗೌರವಕ್ಕೆ ಪಾತ್ರರಾಗಿದ್ದೂ ಅಲ್ಲದೇ 221 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 117 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ಈ ಮಧ್ಯೆ ನಾಯಕ ಪಾರಸ್ ದೊಗ್ರಾ 48 ಎಸೆತಗಳಲ್ಲಿ 9 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿ ಪಡೆದರೆ, ಅಬ್ದುಲ್ ಸಮಾದ್ 67 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ಅರ್ಧಶತಕದ (ಅಜೇಯ 52) ಪೂರೈಸಿದರು.

ಕ್ರೀಡಾಂಗಣ ಹೌಸ್ ಫುಲ್

ಹುಬ್ಬಳ್ಳಿ ನಗರದ ಕೆ‌ಎಸ್​ಸಿಎ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯ ವೀಕ್ಷಣೆಗೆ ಕ್ರೀಡಾಭಿಮಾನಿಗಳ ದಂಡೇ ಆಗಮಿಸಿತ್ತು.

ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಜಮ್ಮು ಕಾಶ್ಮೀರ ಹಾಗೂ 9ನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದರು.

ಬೆಳಗ್ಗೆಯಿಂದಲೇ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಟಿಕೆಟ್ ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಟಿಕೆಟ್ ದರ 100 ಹಾಗೂ 200 ರೂಪಾಯಿ ನಿಗದಿ ಮಾಡಲಾಗಿದೆ. ಪ್ರೇಕ್ಷಕರು ನಿರೀಕ್ಷೆ ಮೀರಿ ಪಂದ್ಯ ವೀಕ್ಷಿಸಲು ಬಂದಿದ್ದಾರೆ. ಕ್ರೀಡಾಂಗಣದ ಎಲ್ಲಾ ಗ್ಯಾಲರಿಗಳು ತುಂಬಿವೆ.

ಕ್ರೀಡಾಂಗಣದ ಮೂರನೇ ಹಾಗೂ ನಾಲ್ಕನೇ ಗೇಟ್​ನಲ್ಲಿ 300-400 ರೂಪಾಯಿ ಕೊಟ್ಟು ಜೆರ್ಸಿ ಖರೀದಿಸುವ ದೃಶ್ಯ ಕಂಡುಬಂತು. ಖರೀದಿ ಜೋರಾಗಿದ್ದರಿಂದ ಜೆರ್ಸಿ ಮಾರಾಟಗಾರರು ಖುಷಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments