ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಜ್ಯೋತಿಷಿಗೆ 200 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತಮಿಳುನಾಡಿನ ಶಿವಗಂಗಾ ಜಿಲ್ಲಾ ಪೋಕ್ಸೋ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.
ಜ್ಯೋತಿಷ್ಯ ಹೇಳುವುದು, ದೋಷ ನಿವಾರಣೆಗೆ ಪಿರಹಾರ ಪೂಜೆ ನೆಪದಲ್ಲಿ 18 ಮತ್ತು 14ನೇ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಶಿವಗಂಗಾ ಜಿಲ್ಲೆಯ ಮನಗಿರಿ ಪ್ರದೇಶದ ಜ್ಯೋತಿಷಿ ರಾಮಕೃಷ್ಣನ್ (52)ಗೆ ಶಿಕ್ಷೆ ವಿಧಿಸಲಾಗಿದೆ.
ನವೆಂಬರ್ 2021ರಲ್ಲಿ, ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳು ಓದಿನಲ್ಲಿ ಹಿಂದಿದ್ದು, ಇದಕ್ಕೆ ಪರಿಹಾರ ಸೂಚಿಸುವಂತೆ ಈ ಜ್ಯೋತಿಷಿಯ ಸಂಪರ್ಕ ಮಾಡಿದ್ದಳು. ಕೆಲವು ಆಚರಣೆಗಳಿದ್ದು, ಪರಿಹಾರಕ್ಕಾಗಿ ಇಬ್ಬರು ಹೆಣ್ಣುಮಕ್ಕಳನ್ನು ತನ್ನ ಮನೆಗೆ ಕರೆತರುವಂತೆ ಜ್ಯೋತಿಷಿ ಸೂಚಿಸಿದ್ದ. ಇದನ್ನು ನಂಬಿದ ಮಹಿಳೆ, ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಆತನ ಮನೆಗೆ ಕರೆದೊಯ್ದಿದ್ದಳು.
ಮಹಿಳೆಯನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಿದ್ದ ಜ್ಯೋತಿಷಿ, ಇಬ್ಬರು ಬಾಲಕಿಯರನ್ನು ಬೇರೆ ಕೋಣೆಗೆ ಕರೆದೊಯ್ದು, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯವನ್ನು ಬಹಿರಂಗಪಡಿಸಿದರೆ ಪೋಷಕರ ಜೀವವನ್ನು ತೆಗೆಯಲಾಗುತ್ತದೆ ಎಂದು ಬೆದರಿಕೆ ಹಾಕಿದ್ದ.
ಭಯಭೀತರಾದ ಹುಡುಗಿಯರು ಹಲವು ದಿನಗಳ ಕಾಲ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಸುಮಾರು ಎರಡು ವರ್ಷಗಳ ನಂತರ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ, ಅವರಿಗೆ ಲೈಂಗಿಕವಾಗಿ ಹರಡುವ ರೋಗವಿದೆ ಎಂದು ಗೊತ್ತಾಗಿತ್ತು.
ಮಕ್ಕಳನ್ನು ಸೂಕ್ಷ್ಮವಾಗಿ ತಾಯಿ ವಿಚಾರಿಸಿದಾಗ ಆಘಾತಕ್ಕೆ ಒಳಗಾದ ತಾಯಿ ಜೋತಿಷಿ ವಿರುದ್ಧ ತಿರುಪತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದರು. ದಾಖಲಾದ ದೂರು ಆಧರಿಸಿ ಜ್ಯೋತಿಷಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಶಿವಗಂಗಾ ಜಿಲ್ಲಾ ಪೋಕ್ಸೋ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ನ್ಯಾಯಾಧೀಶ ಗೋಕುಲ್ ಮುರುಗನ್, ಮಂಗಳವಾರ ಜ್ಯೋತಿಷಿ ರಾಮಕೃಷ್ಣನ್ ಗೆ 200 ವರ್ಷಗಳ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ತಮಿಳುನಾಡು ರಾಜ್ಯ ಸರ್ಕಾರವು ಸಂತ್ರಸ್ತ ಇಬ್ಬರು ಬಾಲಕಿಯರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದೂ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.



