ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ದಾಖಲೆಯ 17ನೇ ಬಜೆಟ್ ದೇಶದ 5ನೇ ಅತೀ ದೊಡ್ಡ ಬಜೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನೆರೆಯ ತಮಿಳುನಾಡನ್ನು ಹಿಂದಿಕ್ಕಿದೆ.
ಸಿಎಂ ಸಿದ್ದರಾಮಯ್ಯ ದಾಖಲೆಯ 4.48 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 39 ಸಾವಿರ ಕೋಟಿ ಹೆಚ್ಚುವರಿ ಬಜೆಟ್ ಇದಾಗಿದೆ.
ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ ದಾಟಿರುವ 6 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ ಕರ್ನಾಟಕವೇ ಅತಿ ದೊಡ್ಡ ಗಾತ್ರದ ಬಜೆಟ್ ಮಂಡಿಸಿರುವ ಖ್ಯಾತಿಗೆ ಪಾತ್ರವಾಗಿದೆ.
ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಇದೀಗ 4.8 ಕೋಟಿ ಲಕ್ಷ ಕೋಟಿ ಬಜೆಟ್ ಮಂಡಿಸುವ ಮೂಲಕ 5ನೇ ಸ್ಥಾನಕ್ಕೆ ಏರಿದೆ. ಆದರೆ ತಮಿಳುನಾಡು ಪ್ರಸಕ್ತ ಸಾಲಿನ ಬಜೆಟ್ ಇನ್ನೂ ಮಂಡಿಸಿಲ್ಲ.
ತಮಿಳುನಾಡು ಬಜೆಟ್ ಗಾತ್ರ 2025-26ರ ಸಾಲಿನಲ್ಲಿ 4.39 ಲಕ್ಷ ಕೋಟಿ ರೂ. ಇದ್ದು, ಈ ವರ್ಷ ಅದರ ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ ಇದೆ. ಹೀಗಾಗಿ, ಅತಿದೊಡ್ಡ ಬಜೆಟ್ ಗಾತ್ರ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಐದನೇ ಸ್ಥಾನ ಪಡೆಯಬಹುದು.
ಉತ್ತರಪ್ರದೇಶ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದೆನಿಸಿದೆಯಾದರೂ ಅದರ ಬಜೆಟ್ ಗಾತ್ರ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ಬಜೆಟ್ 9.12 ಲಕ್ಷ ಕೋಟಿ ಇದ್ದರೂ ಜಿಡಿಪಿಯಲ್ಲಿ ಕರ್ನಾಟಕ, ತಮಿಳುನಾಡುಗಿಂತ ಕಡಿಮೆ ಇದೆ.
ಉತ್ತರ ಪ್ರದೇಶ ಭೌಗೋಳಿಕವಾಗಿ ದೇಶದಲ್ಲೇ ಅತೀ ದೊಡ್ಡ ರಾಜ್ಯವಾಗಿದೆ. ಆದರೆ, ಜಿಡಿಪಿ ಗಾತ್ರಕ್ಕೆ ಬಜೆಟ್ ಗಾತ್ರವನ್ನು ಹೋಲಿಸಿದಾಗ ಉತ್ತರಪ್ರದೇಶ ವಿಶೇಷವಾಗಿ ನಿಲ್ಲುತ್ತದೆ. ಅದರ ಬಜೆಟ್ ಗಾತ್ರವು ರಾಜ್ಯ ಜಿಡಿಪಿ ಶೇ. 25ಕ್ಕಿಂತಲೂ ಹೆಚ್ಚಿದೆ. ಇದಕ್ಕೆ ಹೋಲಿಸಿದರೆ, ಕರ್ನಾಟಕದ ಬಜೆಟ್ ಗಾತ್ರವು ಶೇ. 15ರ ಆಸುಪಾಸಿನಷ್ಟಿದೆ.
ಉತ್ತಮ ಆರ್ಥಿಕತೆ ಹೊಂದಿರುವ ರಾಜ್ಯಗಳ ಬಜೆಟ್ ಗಾತ್ರ ಸಾಮಾನ್ಯವಾಗಿ ಶೇ. 15ಕ್ಕಿಂತ ಕಡಿಮೆ ಇರುತ್ತದೆ. ಹಿಂದುಳಿದ ರಾಜ್ಯಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚು ಹೂಡಿಕೆ ಬೇಕಾಗುತ್ತದೆ. ಅಂಥ ರಾಜ್ಯಗಳಲ್ಲಿ ಬಜೆಟ್ ಗಾತ್ರ ಶೇ. 15ಕ್ಕಿಂತಲೂ ಹೆಚ್ಚಿರುತ್ತದೆ ಎಂಬುದು ಆರ್ಥಿಕ ತಜ್ಞರ ಅನಿಸಿಕೆಯಾಗಿದೆ.
ಅತಿದೊಡ್ಡ ಬಜೆಟ್
ಉತ್ತರಪ್ರದೇಶ: 9.12 ಲಕ್ಷ ಕೋಟಿ ರೂ (2026-27)
ಮಹಾರಾಷ್ಟ್ರ: 7 ಲಕ್ಷ ಕೋಟಿ ರೂ (2025-26)
ರಾಜಸ್ಥಾನ: 6.11 ಲಕ್ಷ ಕೋಟಿ ರೂ (2026-27)
ಕರ್ನಾಟಕ: 4.48 ಲಕ್ಷ ಕೋಟಿ ರೂ (2026-27)
ತಮಿಳುನಾಡು: 4.39 ಲಕ್ಷ ಕೋಟಿ ರೂ (2025-26)
ಗುಜರಾತ್: 4.08 ಲಕ್ಷ ಕೋಟಿ ರೂ (2026-27)
ಪಶ್ಚಿಮ ಬಂಗಾಳ: 4.06 ಲಕ್ಷ ಕೋಟಿ ರೂ (2026-27 ಮಧ್ಯಂತರ ಬಜೆಟ್)
ಆಂಧ್ರಪ್ರದೇಶ: 3.32 ಲಕ್ಷ ಕೋಟಿ ರೂ (2026-27)
ಬಿಹಾರ್: 3.47 ಲಕ್ಷ ಕೋಟಿ ರೂ (2026-27)
ಒಡಿಶಾ: 2.90 ಲಕ್ಷ ಕೋಟಿ ರೂ (2025-26)



