Friday, May 15, 2026
Google search engine
Homeರಾಜಕೀಯಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ್ ಪಾಟೀಲ್ ರಾಜೀನಾಮೆ

ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ್ ಪಾಟೀಲ್ ರಾಜೀನಾಮೆ

ಹುಬ್ಬಳ್ಳಿ: ಪದವೀಧರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ್ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ.

ವಿಧಾನಪರಿಷತ್ ಸ್ಥಾನಕ್ಕೆ ಬಿಜೆಪಿ ಟಿಕೆಟ್ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿರುವ ಲಿಂಗರಾಜ್ ಪಾಟೀಲ್, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ನನ್ನನ್ನು ಕಡೆಗಣಿಸಿ ಎಸ್.ವಿ.ಸಂಕನೂರು ಅವರಿಗೆ ಟಿಕೆಟ್ ನೀಡಿದ್ದರಿಂದ ನೋವಾಗಿದೆ. ಹೀಗಾಗಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಎಂದು ಮನವಿ ಮಾಡಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆಯಿಲ್ಲ. ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಈ ಮೂಲಕ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ. 37 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದೇನೆ. ಇದನ್ನು ಗುರುತಿಸದೇ ಪಕ್ಷ ಹೊರಗಿನಿಂದ ಬಂದವರಿಗೆ ಮಣೆ ಹಾಕಿ ಟಿಕೆಟ್ ನೀಡಿದ್ದು, ಸಾಕಷ್ಟು ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಕನೂರ ಫೋನ್ ಮಾಡಿಲ್ಲ: ಟಿಕೆಟ್ ಘೋಷಣೆ ಬಳಿಕವೂ ಎಸ್.ವಿ.ಸಂಕನೂರ ನನಗೆ ಸೌಜನ್ಯಕ್ಕೂ ಕರೆ ಮಾಡಿ ಮಾತನಾಡಿಲ್ಲ. ಈ ಹಿಂದೆ ಇದೇ ಸಂಕನೂರ ಟಿಕೆಟ್ ವಿಚಾರವಾಗಿ ನನ್ನ ಕಾಲು ಹಿಡಿಯಲು ಬಂದಿದ್ದರು. ನೀವು ಹಿರಿಯರು, ಗುರುಗಳು ಹೀಗೆಲ್ಲ ಮಾಡಬಾರದು ಎಂದು ನಾನೇ ಅವರ ಕಾಲು ಮುಗಿದಿದ್ದೇನೆ ಎಂದರು.

ಸಂಕನೂರ ಪಕ್ಷಕ್ಕೆ ಏನೂ ಮಾಡಿದ್ದಾರೆ ಎಂದು ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ಅವರು ಯಾರೊಬ್ಬರ ಫೋನ್ ಕರೆಗೆ ಸ್ಪಂದಿಸುವುದಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ, ಅಂತವರಿಗೆ ಯಾವ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ ಎಂಬುದು ಆಶ್ಚರ್ಯವಾಗಿದೆ. ಪಶ್ಚಿಮ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ನೋಂದಣಿ ಮಾಡಿಸಿದ್ದೇನೆ. ನಿರಂತರವಾಗಿ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಟಿಕೆಟ್ ದೊರೆಯುವುದು ನಿಶ್ಚಿತ ಎಂದು ಪ್ರತಿಯೊಬ್ಬ ನಾಯಕರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದೆ. ಆದರೆ ಪಕ್ಷ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದ್ದನ್ನು ಗಮನಿಸಿದ ಮೇಲೆ ನನಗೆ ಬಹಳ ಬೇಸರವಾಯಿತು ಎಂದು ಅಳಲು ತೋಡಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments