ತೈಲ ಖರೀದಿಸಲು ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ರಷ್ಯಾ ಬಳಿ ಭಿಕ್ಷೆ ಬೇಡುತ್ತಿವೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಒಂದು ತಿಂಗಳ ಕಾಲ ಬೆದರಿಸಿತ್ತು. ಈಗ ಇರಾನ್ ಜೊತೆಗಿನ ಎರಡು ವಾರಗಳ ಯುದ್ಧದ ನಂತರ ಅಮೆರಿಕ ಭಾರತ ಸೇರಿದಂತೆ ಜಗತ್ತಿನ ಜೊತೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಬೇಡಿಕೊಳ್ಳುತ್ತಿದೆ ಎಂದು ಬರೆದಿದ್ದಾರೆ.
ಇರಾನ್ ಮೇಲೆ ನಡೆಯುತ್ತಿರುವ ಅಕ್ರಮ ಯುದ್ಧವನ್ನು ಯುರೋಪ್ ಬೆಂಬಲಿಸುವ ಮೂಲಕ ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದೆ. ಇದು ಶೋಚನೀಯ ಎಂದು ಸಿಟ್ಟು ಹೊರಹಾಕಿದ್ದಾರೆ.
ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆ ಹಲವು ತಿಂಗಳಿನಿಂದ ನಡೆಯುತ್ತಾ ಬಂದಿದ್ದರೂ ಅಂತಿಮವಾಗಿರಲಿಲ್ಲ. ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು.
ಕಳೆದ ವಾರ ಅಮೆರಿಕ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅನುಮತಿ ನೀಡಿರುವುದಾಗಿ ಹೇಳಿತ್ತು. ಈಗ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಯಾರೂ ಬೇಕಾದರೂ ಕಚ್ಚಾ ತೈಲವನ್ನು ಖರೀದಿಸಬಹುದು ಎಂದು ಹೇಳಿದೆ.



