Saturday, June 13, 2026
Google search engine
Homeರಾಜ್ಯಯುಕೆಪಿ ಹಂತ 3ರ ಭೂಪರಿಹಾರಕ್ಕಾಗಿ 3 ಸಾವಿರ ಕೋಟಿ ರೂ. ಮೀಸಲು: ಸಿಎಂ ಸಿದ್ದರಾಮಯ್ಯ

ಯುಕೆಪಿ ಹಂತ 3ರ ಭೂಪರಿಹಾರಕ್ಕಾಗಿ 3 ಸಾವಿರ ಕೋಟಿ ರೂ. ಮೀಸಲು: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಕೃಷ್ಣ ಮೇಲ್ದಂಡೆ ಯೋಜನೆ ಅಂತ ಮೂರರ ಭೂ ಸ್ವಾಧೀನಗೊಳ್ಳುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಭಾಗದ ಶಾಸಕರಾಗಿದ್ದ ಹೆಚ್.ವೈ.ಮೇಟಿಯವರು ದಿವಂಗತರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರುವುದಾಗಿ ಸಿಎಂ ತಿಳಿಸಿದರು. ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿನ ಶಂಕುಸ್ಥಾಪನೆಯಾಗಲು ಹೆಚ್.ವೈ.ಮೇಟಿಯವರೇ ಕಾರಣ. ಮೆಡಿಕಲ್ ಕಾಲೇಜ್ ಸ್ಥಾಪಿಸಲು 2025ರ ಬಜೆಟ್ ನ ಘೋಷಣೆಯಾಗಿದ್ದು, ಇಂದು ಶಂಕುಸ್ಥಾಪನೆಗೊಳ್ಳುತ್ತಿದೆಯೇ ಹೊರತು, ಉಪಚುನಾವಣೆಯ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅನೇಕ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಹಲವು ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳನ್ನು ಮಾಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಹಾಗೂ ಟ್ರಾಮಾ ಸೆಂಟರ್ ಗಳನ್ನು ಸ್ಥಾಪನೆಯ ಉದ್ದೇಶವಿದ್ದು, ಈಗಾಗಲೇ ಸುಮಾರು 25 ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ

ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಸರ್ಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದ್ದೇವೆ. ಪ್ರತಿ ವರ್ಷ ಗ್ಯಾರಂಟಿಗಳಿಗೆ ಸುಮಾರು 50 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದುವರೆಗೆ 1.22 ಲಕ್ಷ ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ, ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಿಲ್ಲ. ಜಾತಿ ಧರ್ಮಗಳ ಮಧ್ಯೆ ವೈಮನಸ್ಯ ತರುವುದು ಅವರ ದುರಾಲೋಚನೆಯಾಗಿದೆ ಎಂದರು.

ಯುಕೆಪಿ ಹಂತ 3 ಭೂಪರಿಹಾರ ಒಂದೇ ಬಾರಿಗೆ ಪಾವತಿ

ಬಿಜೆಪಿಯವರು ತಮ್ಮ ಅವಧಿಯಲ್ಲಿ ಯುಕೆಪಿ ಯೋಜನೆಗೆ ಪರಿಹಾರ ನೀಡಲು ಆಸಕ್ತಿ ವಹಿಸಲಿಲ್ಲ. ಆದ್ದರಿಂದ ರೈತರು ಭೂಮಿ ನೀಡಲು ಮುಂದೆ ಬರಲಿಲ್ಲ. ಈಗ ರೈತರಿಗೆ ಭೂ ಪರಿಹಾರವನ್ನು ಒಂದೇ ಬಾರಿಗೆ ನೀಡಲು ಕಾಂಗ್ರೆಸ್ ಸರ್ಕಾರ ನಿರ್ಣಯಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಯುಕೆಪಿ ಯೋಜನೆಯ 3 ಹಂತದಲ್ಲಿ ಭೂಪರಿಹಾರಕ್ಕೆ ಹಣ ಮೀಸಲಿಡಲಾಗಿದ್ದು, ನಂತರವೂ ಹೆಚ್ಚಿನ ಅನುದಾನಕ್ಕೆ ವ್ಯವಸ್ಥೆಗೊಳಿಸಲಾಗುವುದು. ಸ್ವಯಂಪ್ರೇರಣೆಯಿಂದ ಭೂಮಿ ನೀಡುವ ರೈತರಿಗೆ ನೀರಾವರಿಜಮೀನಿಗೆ 40 ಲಕ್ಷ ರೂ, ಹಾಗೂ ಖುಷ್ಕಿ ಜಮೀನಿಗೆ 30 ಲಕ್ಷ ರೂ. ನೀಡಲು ಸರ್ಕಾರ ನಿರ್ಣಯಿಸಿದೆ. ಆದರೆ ಈ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ದೊರಕಿಲ್ಲ

ಯುಕೆಪಿ ಯೋಜನೆಯ ವ್ಯಾಪ್ತಿಗೆ ಬರುವ 8 ಗ್ರಾಮಗಳಲ್ಲಿ 900 ಎಕರೆಗೆ 446 ಕೋಟಿ ರೂ.ಗಳ ಪರಿಹಾರವನ್ನು ಕೊಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಎಂದಿಗೂ ನುಡಿದಂತೆ ನಡೆಯುತ್ತದೆ. ಕೇಂದ್ರಕ್ಕೆ ಹಲವು ಮನವಿಗಳ ನಂತರವೂ, ಯುಕೆಪಿ, ಮಹಾದಾಯಿ ಸೇರಿದಂತೆ ಹಲವು ನೀರಾವರಿ ಯೋಜನೆಗೆ ಬೇಕಾದ ಅಗತ್ಯ ಅನುಮತಿಗಳನ್ನು ಕೇಂದ್ರ ಸರ್ಕಾರ ಇದುವರೆಗೆ ನೀಡಿಲ್ಲ. ಆದರೆ ನಮ್ಮ ಸರ್ಕಾರ ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments