ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಆಗ್ರಹಿಸಿದ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಈ ಬಾರಿ ನಯಾ ಪೈಸೆ ನೀಡಿಲ್ಲ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕೂಲಿ ಸಿಗಬೇಕು. ಅವರಿಗೆ ಅತಿ ಶೀಘ್ರ ಮುಖ್ಯಮಂತ್ರಿ ಹುದ್ದೆ ಸಿಗಬೇಕು. ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ಒತ್ತಾಯಿಸುವುದಾಗಿ ಹೇಳಿದರು.
ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು ಆಗ್ರಹಿಸಿ ಮೇ ತಿಂಗಳಲ್ಲಿ ವಿವಿಧ ಮಠಾಧೀಶರ ಬೃಹತ್ ಸಭೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಡಿಕೆ ಶಿವಕುಮಾರ್ ಅವರ ದಿನಾಂಕ ಕೇಳಲು ಅವರನ್ನು ಭೇಟಿಯಾಗಿದ್ದು, ಸಮಾವೇಶಕ್ಕೆ ಬರಲು ಅವರು ಒಪ್ಪಿದ್ದಾರೆ ಎಂದು ಅವರು ಹೇಳಿದರು.
ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸುತ್ತೇವೆ ಎನ್ನುವ ಕಾರಣಕ್ಕೆ ನಮ್ಮ ಸಮುದಾಯದ ಯಾವುದೇ ಬೇಡಿಕೆಯನ್ನು ಸಿದ್ದರಾಮಯ್ಯ ನೆರವೇರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಪರ ಮಾತಾಡಿದ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಿಎಂ ಪರವಾಗಿ ಮಾತನಾಡಿದ ಸ್ವಾಮೀಜಿಗಳಿಗೆ ಭೂಮಿ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಒತ್ತಾಯಿಸಿ ಹದಿನೈದು ಸ್ವಾಮೀಜಿಗಳು ದೆಹಲಿಗೆ ಪ್ರಯಾಣ ಬೆಳೆಸಲಿದ್ದೇವೆ ಎಂದು ಹೇಳಿದ್ದಾರೆ. ಕೆಸಿ ವೇಣುಗೋಪಾಲ್ ಜೊತೆಗೆ ಈಗಾಗಲೇ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದಾಗಿ ಸ್ವಾಮೀಜಿ ಹೇಳಿದ್ದಾರೆ.



