ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಗಳಿಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಪ್ರಮಾಣದಲ್ಲಿ ಶೇ.20ರಷ್ಟು ಹೆಚ್ಚಳ ಮಾಡಿದೆ.
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಪೂರೈಕೆ ಪ್ರಮಾಣದಲ್ಲಿ ಕಡಿತ ಮಾಡಿ ಕುಟುಂಬ ನಿರ್ವಹಣಗೆ ಆದ್ಯತೆ ನೀಡಿತ್ತು. ಇದರಿಂದ ಬೆಂಗಳೂರು ಸೇರಿದಂತೆ ದೇಶಾದ್ಯಂತ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿತ್ತು.
ಭಾರತದಲ್ಲಿ ಎಲ್ ಪಿಜಿ ಉತ್ಪಾದನೆ ಪ್ರಮಾಣ ಶೇ.40ರಷ್ಟು ಹೆಚ್ಚಳ ಮಾಡಿದ್ದೂ ಅಲ್ಲದೇ ಇರಾನ್ 2 ಎಲ್ ಪಿಜಿ ಹಡಗುಗಳನ್ನು ಹರ್ಮುಜ್ ಜಲಸಂಧಿಯಿಂದ ಬಿಡುಗಡೆ ಮಾಡಿದ್ದು, ಇದೀಗ ಮತ್ತೆರಡು ಹಡಗುಗಳನ್ನು ಬಿಟ್ಟಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವಾಲಯ ಶನಿವಾರದಿಂದ ಎಲ್ಲಾ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಪ್ರಮಾಣದಲ್ಲಿ ಶೇ.20ರಷ್ಟು ಹೆಚ್ಚಳ ಮಾಡಿದೆ.
ಅಭಾವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೇ.20ರಷ್ಟು ಮಾತ್ರ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುತ್ತಿತ್ತು. ನಂತರ ಶೆ.10ರಷ್ಟು ಏರಿಕೆ ಮಾಡಿತ್ತು. ಇದೀಗ ಶೇ.20ರಷ್ಟು ಎಲ್ ಪಿಜಿ ಪೂರೈಕೆ ಪ್ರಮಾಣ ಹೆಚ್ಚಿಸಿದೆ. ಇದರಿಂದ ಒಟ್ಟಾರೆ ಶೇ.50ರಷ್ಟು ವಾಣಿಜ್ಯ ಬಳಕೆಯ ಎಲ್ ಪಿಜಿ ಪೂರೈಕೆ ಹೆಚ್ಚಿದಂತಾಗಿದೆ.
ಭಾರತದತ್ತ ಮತ್ತೆರಡು ಎಲ್ ಪಿಜಿ ಹಡಗು
ಇರಾನ್ ಭಾರತ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳ ಹಡಗುಗಳನ್ನು ಹರ್ಮುಜ್ ಜಲಸಂಧಿಯಿಂದ ಬಿಡುಗಡೆ ಮಾಡಿದೆ.
ಭಾರತದ ಎರಡು ಎಲ್ ಪಿಜಿ ಹಡುಗಗಳನ್ನು ಹರ್ಮುಜ್ ಜಲಸಂಧಿಯಿಂದ ಹೊರಟ್ಟಿದ್ದು, ಇನ್ನೆರಡು ದಿನದಲ್ಲಿ ತಲುಪಲಿವೆ.
ಇರಾನ್ ಅಮೆರಿಕ ಮಿತ್ರ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ದೇಶಗಳ ತೈಲ ಹಾಗೂ ಎಲ್ ಪಿಜಿ ಹಡಗುಗಳನ್ನು ಹರ್ಮುಜ್ ಜಲಸಂಧಿಯಿಂದ ಬಿಡುಗಡೆ ಮಾಡಿವೆ.
ಎಲ್‌ಪಿಜಿ ಟ್ಯಾಂಕರ್ ಗಳನ್ನು ಹೊತ್ತಿರುವ ಎರಡು ಭಾರತೀಯ ನೌಕೆಗಳಾದ ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಬಳಿ ಲಂಗರು ಹಾಕಿಕೊಂಡಿವೆ. ಈ ಎರಡೂ ಹಡಗುಗಳು ಪ್ರಯಾಣಕ್ಕೆ ತಯಾರಿ ನಡೆಸುತ್ತಿರುವ ಸಂಕೇತಗಳನ್ನು ಪ್ರಸಾರ ಮಾಡುತ್ತಿವೆ. ಇವುಗಳು ಶನಿವಾರ ಭಾರತದತ್ತ ಹೊರಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ ಯಾವುದೇ ಅಧಿಕೃತ ಮಾಹಿತಿ ಲಾಭವಾಗಿಲ್ಲ ಎಂದು ಭಾರತದ ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಹಡಗುಗಳು ಸುರಕ್ಷಿತವಾಗಿ ಸಾಗುವಂತೆ ಮಾಡಲು ಭಾರತದ ವಿದೇಶಾಂಗ ಸಚಿವಾಲಯವು ಎಚ್ಚರಿಕೆಯನ್ನು ನೀಡಿದೆ. ಪ್ರಸ್ತುತ ಕೊಲ್ಲಿಯಲ್ಲಿರುವ ಭಾರತದ ನೌಕಾಪಡೆಯ 22 ಹಡಗುಗಳು ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಚಲನೆಯನ್ನು ನಿರ್ಧರಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ತಿಳಿಸಿದ್ದಾರೆ.



