Friday, May 29, 2026
Google search engine
Homeರಾಜ್ಯಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ: ಅಪರೂಪದ ಶೋಲಾ ಹುಲ್ಲುಗಾವಲು ಆಹುತಿ!

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ: ಅಪರೂಪದ ಶೋಲಾ ಹುಲ್ಲುಗಾವಲು ಆಹುತಿ!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ ಬಿದ್ದಿದ್ದು ಅಪರೂಪದ ಶೋಲಾ ಹುಲ್ಲುಗಾವಲು, ಸಸ್ಯ ಸಂಪತ್ತು ಸೇರಿದಂತೆ ಅಮೂಲ್ಯ ಔಷಧಿ ಗಿಡಗಳು ಸಹ ಬೆಂಕಿಗಾಹುತಿಯಾಗಿವೆ.

ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಸುಮಾರು 20 ಕಡೆ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಬೇಜಾವಾಬ್ದಾರಿಯಿಂದ ಹಾನಿ ಆಗಿದೆ ಎಂದು ಪರಿಸರವಾದಿಗಳು ಹಾಗೂ ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಡಿಗೆ ತಾಲೂಕಿನ ಹತ್ತಾರು ಕಿಲೋಮೀಟರ್ ದೂರದವರೆಗೂ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ ಕಾಣಿಸುತ್ತಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ವಲಯದ ಮಾಣಿಕ್ಯ ಬೆಟ್ಟ, ವಾಲೀಕುಂಜಗಿರಿ, ಹಾಗೂ ಪ್ರಮುಖವಾದ ಹುಲ್ಲುಗಾವಲು ಇರುವ ಸಾಲಿನಲ್ಲೂ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯಿಂದಾಗಿ ನೆಲದಲ್ಲಿ ಗೂಡು ಕಟ್ಟುವ ಪಕ್ಷಿ, ಪ್ರಾಣಿಗಳು, ಅಪರೂಪದ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗಿರುವ ಶಂಕೆ ಇದೆ. ನೂರಾರು ಎಕರೆಗಟ್ಟಲೇ ಅರಣ್ಯ ಬೆಂಕಿಗಾಹುತಿಯಾಗಿದ್ದರೂ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಭಾಗದಲ್ಲಿ ಬೆಂಕಿ ಗೆರೆಗಳನ್ನು ಮಾಡದೇ ಇರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೇಸಿಗೆ ಸಮಯದಲ್ಲಿ ಅರಣ್ಯ ರಕ್ಷಣೆ ಹಾಗೂ ಬೆಂಕಿ ಕಾಡ್ಗಿಚ್ಚುಗಳನ್ನು ತಡೆಗಟ್ಟಲು ಅರಣ್ಯ ವೀಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಅರಣ್ಯ ವೀಕ್ಷಕರ ನೇಮಕ ಮಾಡಿಕೊಂಡಿಲ್ಲ, ಬೆಂಕಿ ನಿಯಂತ್ರಣ ರೇಖೆ, ವೀಕ್ಷಣಾ ಗೋಪುರ ಯಾವುದನ್ನೂ ಮಾಡಿಲ್ಲ. ಕಳೆದ ಏಳೆಂಟು ದಿನಗಳಿಂದ ಈ ಭಾಗದಲ್ಲಿ ಅರಣ್ಯ ಹೊತ್ತಿ ಉರಿಯುತ್ತಿದ್ದರೂ ಸ್ಥಳಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕಾರ್ಕಳ ಡಿಎಫ್ಒ ವಿರುದ್ಧ ಪರಿಸರವಾದಿಗಳು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುದುರೆಮುಖ ಅರಣ್ಯವೂ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಈ ನಾಲ್ಕು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಇಂತಹ ಪ್ರಕರಣಗಳು ಜರುಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಗರಿಷ್ಠ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಹೊಂದಿರುವಂತಹ ಜಿಲ್ಲೆಯಾಗಿದ್ದು, ಇದರ ಜೊತೆ ಅತಿ ಹೆಚ್ಚು ಗಿರಿ ಶಿಖರ, ಪಶ್ಚಿಮಘಟ್ಟ ಪ್ರದೇಶಗಳನ್ನು ಹೊಂದಿದೆ. ಬೇಸಿಗೆಯ ಆರಂಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗದಲ್ಲಿ ಬೆಂಕಿಯ ಕಾಡ್ಗಿಚ್ಚು ಬೀಳುವುದು ಸಾಮಾನ್ಯವಾಗಿದೆ. ಈ ಕಾಡ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆ ಈಗಾಗಲೇ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಳ್ಳಯ್ಯನಗಿರಿ ತಪ್ಪಲು, ಸೀತಾಳಯ್ಯನಗಿರಿ ತಪ್ಪಲು, ಹಾಗೂ ಕಳಸಪುರ ಭಾಗದಲ್ಲಿ ಈಗಾಗಲೇ ಅರಣ್ಯ ಇಲಾಖೆ ಬೆಂಕಿ ಗೆರೆಗಳನ್ನು ಕೂಡ ನಿರ್ಮಾಣ ಮಾಡಿದೆ.

ಈ ಹಿಂದೆ ಮುಳ್ಳಯ್ಯನಗಿರಿ ಭಾಗದಲ್ಲಿ ಚಾರ್ಮಾಡಿ ಘಾಟ್ ಪ್ರದೇಶದ ಕೆಲ ಅರಣ್ಯ ಪ್ರದೇಶದಲ್ಲಿ, ಹುಲ್ಲುಗಾವಲು ಪ್ರದೇಶದಲ್ಲಿ ಹಾಗೂ ಕಡೂರು ರಸ್ತೆಯಲ್ಲಿ ಬರುವ ಚುರ್ಚೆ ಗುಡ್ಡದಲ್ಲಿ ಬೆಂಕಿಯ ಕಾಡ್ಗಿಚ್ಚು ಬಿದ್ದು ನೂರಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ನಾಶವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments