ಇರಾನ್ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಿದ್ದ ಇಸ್ರೇಲ್ ನ ಪರಮಾಣು ಸ್ಥಾವರಗಳ ಮೇಲೆ ಇರಾನ್ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದೆ.
ಇಸ್ರೇಲ್ ನ ಪರಮಾಣು ಸ್ಥಾವರದ ಮೂಲಸೌಕರ್ಯ ಇರುವ ಡಿಮೊನಾ ಮೇಲೆ ಇರಾನ್ ದಾಳಿ ನಡೆಸಿದ್ದು, ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇರಾನ್ ನ ನತಾನ್ಜ್ ನಲ್ಲಿರುವ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ಎರಡನೇ ಬಾರಿ ದಾಳಿ ನಡೆಸಿದ್ದಕ್ಕಾಗಿ ಪ್ರತಿಯಾಗಿ ಇಸ್ರೇಲ್ ನ ಪರಮಾಣು ಸ್ಥಾವರದ ಮೇಲೆ ದಾಳಿ ನಡೆದಿದೆ.
ಡಿಮೊನಾದಲ್ಲಿರುವ ಶಿಮೊನ್ ಪೆರೆಸ್ ನೆಗೆವ್ ಪರಮಾಣು ಸಂಶೋಧನಾ ಕೇಂದ್ರದಲ್ಲಿರುವ ವಸತಿ ಕೇಂದ್ರಗಳ ಮೇಲೆ ಇರಾನ್ ನ ಎರಡು ಕ್ಷಿಪಣಿಗಳು ಬಿದ್ದಿವೆ. ಇದಲ್ಲದೇ ಅರದ್ ನಗರದ ಮೇಲೂ ಇರಾನ್ ದಾಳಿ ನಡೆಸಿದೆ.
ಅರದ್ ನಲ್ಲಿ 84 ಮಂದಿ ಗಾಯಗೊಂಡಿದ್ದು, ಇದರಲ್ಲಿ 10 ಮಂದಿ ಸ್ಥಿತಿ ಗಂಭೀರವಾಗಿದೆ. ಡಿಮೊನಾದಲ್ಲಿ ನಡೆದ ದಾಳಿಯಲ್ಲಿ 33 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದ್ದು, ಇರಾನ್ ದಾಳಿಯನ್ನು ದೃಢಪಡಿಸಿದೆ.



