ಕೊಪ್ಪಳ ಕನಕಗಿರಿ: ಮನರೇಗಾದ ಬದಲಾದ ರೂಪ ‘ವಿಬಿ ಜಿ ರಾಮ್ ಜಿ’ ಯೋಜನೆಯಡಿ ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ನೀಡದಿದ್ದಲ್ಲಿ ಪಿಡಿಒ ವಿರುದ್ಧ ಕ್ರಮ ಜರುಗಿಸುವುದಾಗಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದರು.
ಬೊಮ್ಮಾಸಾಗರ ತಾಂಡದಲ್ಲಿ ಶನಿವಾರ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಸಾರ್ವಜನಿಕರ ಕೊಂದು ಕೊರತೆ ಅಲಿಸಿ ಮಾತನಾಡಿದ ಸಚಿವರು, ಮಳೆ ಕೊರತೆಯ ಪ್ರಸಕ್ತ ಸನ್ನಿವೇಶದಲ್ಲಿ ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಖಾತ್ರಿಪಡಿಸಲು ಉದ್ಯೋಗ ನೀಡಬೇಕು ಎಂದು ಸೂಚನೆ ನೀಡಿದರು.
ಜನತೆ ಗುಳೆ ಹೋಗುವುದನ್ನು ತಪ್ಪಿಸಿ, ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಪ್ರಚಾರ ಮಾಡಿ, ಗ್ರಾಮೀಣ ಜನರಿಗೆ ಅದರ ಅಡಿಯಲ್ಲಿ ನೀಡುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ ಸೂಚನೆ ನೀಡಿದರು.
ಗ್ರಾಮಕ್ಕೆ ದಿನಕ್ಕೆ ಒಂದು ಬಾರಿ ಬಸ್ ವ್ಯವಸ್ಥೆ ಇದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅಲ್ಲದೇ, ಸ್ಥಳೀಯ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಇದರಿಂದ ಕೆಂಡಮಂಡಲಗೊಂಡ ಸಚಿವರು, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜನರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅಧಿಕಾರಿಗಳಾಗಿ ನೀವು ಏಕೆ ಇಲ್ಲಿ ಇರಬೇಕು? ಇನ್ನೊಮ್ಮೆ ಇಂತಹ ದೂರುಗಳು ಬಂದರೆ ಸಹಿಸುವುದಿಲ್ಲ, ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ, ಅಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸದಿದ್ದರೆ ನೇರವಾಗಿ ತನಗೆ ಕರೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸಂತ್ ಗೌಡ, ತಹಸೀಲ್ದಾರ್ ಚಂದ್ರಶೇಖರ್ ಗಾಳಿ, ಮುಖಂಡರಾದ ನಿರಲೋಟಿ ಸಿದ್ದಪ್ಪ, ವಿರೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.



